Category Archives: ಅಂಕಣಗಳು

ತಾಯ್ನುಡಿಯಲ್ಲಿ ಕಲಿಕೆ ಯಾಕೆ ಮುಖ್ಯ ಎಂಬುದನ್ನು ತಿಳಿಸುವ ಅಂಕಣಗಳು !!

ಕನ್ನಡ ಮಾಧ್ಯಮ ಉಳಿಸುವತ್ತ ಎರಡು ಹೊಸ ಆಲೋಚನೆ ಇಲ್ಲಿದೆ !

ಮೊದಲ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಸುಪ್ರೀಂ ಕೋರ್ಟಿನಲ್ಲಿ ಸೋಲಾಗಿ ಕೆಲ ವರ್ಷಗಳೇ ಕಳೆದಿವೆ. ಇಲ್ಲಿಯವರೆಗೂ ರಾಜ್ಯ ಸರ್ಕಾರ ಈ ವಿಷಯದಲ್ಲಿ ತನ್ನ ನಿಲುವೇನು, ಮುಂದಿನ ಹೆಜ್ಜೆಯೇನು ಅನ್ನುವ ಬಗ್ಗೆ ಒಂದು ಸ್ಪಷ್ಟ ನಿಲುವಿಗೆ ಬರಲು ಸಾಧ್ಯವಾಗಿಲ್ಲ. ಇದರ ನಡುವೆಯೇ ಹಾದಿಗೊಂದು, ಬೀದಿಗೊಂದು ನಾಯಿಕೊಡೆ ಮಾದರಿಯ ಇಂಗ್ಲಿಷ್ ಮಾಧ್ಯಮ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಇಂಗ್ಲಿಷ್ ಮಾಧ್ಯಮವೇ ತಮ್ಮ ಮಕ್ಕಳ ಒಳ್ಳೆಯ ಭವಿಷ್ಯಕ್ಕೆ ಇರುವ ಏಕೈಕ ದಾರಿ ಅನ್ನುವ ಮಾರುಕಟ್ಟೆಯ ಪ್ರಚಾರಕ್ಕೆ ಬಲಿಯಾಗಿರುವ ಪೋಷಕರು ಈ ಶಾಲೆಗಳಲ್ಲಿ ಲಕ್ಷಗಟ್ಟಲೇ ಹಣ ಸುರಿದು ತಮ್ಮ ಮಕ್ಕಳನ್ನು ಸೇರಿಸುತ್ತಲೂ ಇದ್ದಾರೆ. ಜನ ಮರುಳೋ, ಜಾತ್ರೆ ಮರುಳೋ ಅನ್ನುವಂತೆ ಸಾಗುತ್ತಿರುವ ಈ ಬೆಳವಣಿಗೆ ಇನ್ನೊಂದು ಇಪ್ಪತ್ತೈದು ವರ್ಷದಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾರತದ ಭಾಷೆಗಳ ಮುಂದೆ ಬಹಳ ದೊಡ್ಡ ಅಸ್ತಿತ್ವದ ಸವಾಲು ತಂದು ನಿಲ್ಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನಗರಗಳ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ಬಹುತೇಕ ಮಕ್ಕಳಿಗೆ ತಮ್ಮ ತಾಯ್ನುಡಿಯಲ್ಲಿ ಸ್ಪಷ್ಟವಾಗಿ ಮಾತನಾಡಲಾಗಲಿ, ಓದಿ-ಬರೆಯಲಾಗಲಿ ಬರುತ್ತಿಲ್ಲ. ತಮ್ಮ ಸ್ವಂತ ಭಾಷೆಯಿಂದ ವಿಮುಖರಾಗುತ್ತಿದ್ದಂತೆಯೇ ಭಾಷೆಯ ಸುತ್ತಲೇ ರೂಪುಗೊಂಡಿರುವ ಒಂದು ಸಮಾಜದ ಸಾಂಸ್ಕೃತಿಕ, ಸಾಮಾಜಿಕ ಆಯಾಮಗಳೆಲ್ಲದರಿಂದಲೂ ಈ ಮಕ್ಕಳು ದೂರ ಸರಿಯುತ್ತಿರುವ ದುರಂತಕ್ಕೆ ಈಗ ಅಡಿಯಿಡುತ್ತಿದ್ದೇವೆ. ಶಿಕ್ಷಣ ಒಂದು ನಾಡಿನ ಏಳಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಈ ದಿನದಲ್ಲಿ,  ಸಾಮಾಜಿಕ ನ್ಯಾಯದ ಕಲ್ಪನೆಯಲ್ಲಿ ಶಿಕ್ಷಣವನ್ನು ನೋಡುವ ಎಡ ಸಿದ್ಧಾಂತದವರಾಗಲಿ, ಸಾಂಸ್ಕೃತಿಕ ನೆಲೆಯ ರಾಷ್ಟ್ರೀಯತೆ ಪ್ರತಿಪಾದಿಸುವ ಬಲ ಪಂಥೀಯರಿಗಾಗಲಿ ಶಿಕ್ಷಣದ ವಿಷಯದಲ್ಲಿ ಭಾರತೀಯ ಭಾಷೆಗಳು ಸೋತರೆ ಆಗುವ ದುರಂತಗಳ ಕಲ್ಪನೆ ಸ್ಪಷ್ಟವಾಗಿ ಇದ್ದಂತೆ ಕಾಣುತ್ತಿಲ್ಲ. ನಿರಾಸೆಯ ಕಾರ್ಮೋಡ ಕವಿಯುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಮಾಧ್ಯಮಕ್ಕೆ ಜೀವ ತುಂಬಲು ಎರಡು ಕೆಲಸಗಳು ಆದ್ಯತೆಯೆ ಮೇರೆಗೆ ಆಗಬೇಕಿವೆ.

೧. ತಾಯ್ನುಡಿಯಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಜನ ಜಾಗೃತಿ

ಸಿಂಗಾಪುರ, ಹಾಂಗ್ ಕಾಂಗಿನಂತಹ ಸಿಟಿ ಸ್ಟೇಟ್ಸ್ ಬಿಟ್ಟರೆ ಜಗತ್ತಿನ ಮುಂದುವರೆದ ಎಲ್ಲ ದೇಶಗಳು ತಮ್ಮ ತಾಯ್ನುಡಿಯಲ್ಲೇ ಶಿಕ್ಷಣದ ವ್ಯವಸ್ಥೆ ಹೊಂದಿವೆ.  ಹಿಬ್ರೂವಿನಲ್ಲಿ ಕಲಿಯುವ ಇಸ್ರೇಲಿನಂತಹ ಪುಟ್ಟ ದೇಶ ವಿಜ್ಞಾನ, ತಂತ್ರಜ್ಞಾನದ ವಿಷಯದಲ್ಲಿ 70ಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿ ಪಡಿದಿದೆ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ಮಗುವಿನ ಮಾನಸಿಕ ಬೆಳವಣಿಗೆಗೂ, ಅದರ ಚಿಂತನೆಯನ್ನು ಹಿಗ್ಗಿಸುವುದಕ್ಕೂ ಸಹಕಾರಿ ಎಂದು ವಿಶ್ವಸಂಸ್ಥೆಯೂ ಹೇಳಿದೆ. ಜಗತ್ತಿನ ಬಹುತೇಕ ಮನಶಾಸ್ತ್ರಜ್ಞರು, ಶಿಕ್ಷಣ ತಜ್ಞರು ಮಗುವಿಗೆ ತಿಳಿದಿರುವ ಭಾಷೆಯಲ್ಲಿ ಮೊದಲ ಹಂತದ ಶಿಕ್ಷಣ ಕಲ್ಪಿಸುವುದು ಅತ್ಯಂತ ಸರಿಯಾದ ಹೆಜ್ಜೆ ಅನ್ನುವುದನ್ನು ಸಾರಿ ಸಾರಿ ಹೇಳಿದ್ದಾರೆ. ಕನ್ನಡ ನಾಡಿನ ದೊಡ್ಡ ದೊಡ್ಡ ಸಾಧನೆಗೈದ ವಿಜ್ಞಾನಿಗಳು, ಚಿಂತಕರು, ಇಂಜಿನಿಯರುಗಳು, ರಾಜಕಾರಣಿಗಳು, ಅಧಿಕಾರಿಗಳು ಕನ್ನಡ ಮಾಧ್ಯಮದಲ್ಲೇ ತಮ್ಮ ಕಲಿಕೆ ಮಾಡಿದವರು. ಹೀಗಿದ್ದಾಗಲೂ ತಾಯ್ನುಡಿ ಶಿಕ್ಷಣದ ಬಗ್ಗೆ ಜನಸಾಮಾನ್ಯರಲ್ಲಿ ಎದ್ದಿರುವ ಅಪನಂಬಿಕೆಯನ್ನು  ಹೋಗಲಾಡಿಸಲು ಸತ್ಯವೇನು ಅನ್ನುವುದನ್ನು ಜನರಿಗೆ ತಿಳಿಸುವ ದೊಡ್ಡ ಮಟ್ಟದ ಜನ ಜಾಗೃತಿ ಈಗ ನಡೆಯಬೇಕಿದೆ. ಕುಡಿತದ ಕೆಡುಕುಗಳ ಬಗ್ಗೆ, ರಸ್ತೆ ಸುರಕ್ಷತೆಯ ಬಗ್ಗೆ ಸರ್ಕಾರ ಕೈಗೊಳ್ಳುವ ಜನ ಜಾಗೃತಿಯ ರೀತಿಯಲ್ಲೇ ತಾಯ್ನುಡಿಯಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಜನ ಜಾಗೃತಿಯತ್ತ ಸರ್ಕಾರ ಹೆಜ್ಜೆ ಇಡಬೇಕು. ಮಧ್ಯಾಹ್ನ ಊಟ ಕೊಡ್ತಿವಿ, ಬೂಟು, ಸೈಕಲು, ಪುಸ್ತಕ ಕೊಡ್ತಿವಿ, ಮಕ್ಕಳು ಬರಬೇಕಷ್ಟೇ ಅನ್ನುವ ನಿಲುವಿನಲ್ಲಿರುವ ಸರ್ಕಾರ ಈ ಮನಸ್ಥಿತಿ ಬದಲಾವಣೆಯ ಕೆಲಸದ ಮಹತ್ವ ಅರ್ಥ ಮಾಡಿಕೊಳ್ಳಬೇಕಿದೆ. ಈ ಕೆಲಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಸ್ಥೆಗಳು ಕೈ ಜೋಡಿಸಬೇಕು.

೨. ಕನ್ನಡ ಮಾಧ್ಯಮ ಶಾಲೆಗಳ ಪೋಷಕರ ಪಾಲ್ಗೊಳ್ಳುವಿಕೆ

ಇವತ್ತಿಗೂ ಕರ್ನಾಟಕದ 71 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ. ಸರ್ಕಾರವೂ ವರ್ಷಕ್ಕೆ 17,000 ಕೋಟಿಯಷ್ಟು ಹಣವನ್ನು ಶಿಕ್ಷಣಕ್ಕೆಂದೇ ಮೀಸಲಿಡುತ್ತಿದೆ. ಇಷ್ಟಾಗಿಯೂ, ಸರ್ಕಾರಿ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ಪರಿಣಾಮವಾಗಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಕಳಪೆಯಾಗಿದೆ. ಇದೊಂದು ಬಗೆಹರಿಸಲಾಗದ ಸಮಸ್ಯೆಯೇನಲ್ಲ. ಆದರೆ ಇದು ಕನ್ನಡ ಮಾಧ್ಯಮದಲ್ಲಿ ಓದಿಸುವ, ಓದಿಸಬೇಕೆಂದಿರುವ ಸಾಮಾನ್ಯ ಪೋಷಕರಿಂದ ಬದಲಾಯಿಸುವಂತದ್ದಲ್ಲ. ಅದಕ್ಕೆ ಸಾಂಸ್ಥಿಕ ಸ್ವರೂಪದ, ವ್ಯವಸ್ಥೆಯ ಮಟ್ಟದ ಬದಲಾವಣೆಗಳು ಬೇಕಿದೆ. ಈ ಪ್ರಶ್ನೆಯನ್ನು ಕೊಂಚ ಬದಿಗಿಟ್ಟು, ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕೇವಲ ಒಬ್ಬ ಪೋಷಕನಾಗಿ ನಾವೇನು ಮಾಡಬಹುದು ಅನ್ನುವ ಪ್ರಶ್ನೆ ಎತ್ತಿಕೊಂಡರೆ ಪೋಷಕರ ಮತ್ತು ಶಾಲಾ ಆಡಳಿತ ಮಂಡಳಿಯ ನಡುವೆ ಸಂವಾದ, ಚರ್ಚೆ, ಕೂಡಿ ಕೆಲಸ ಮಾಡುವ ಹೊಸತೊಂದು ಮಾದರಿ ನಮ್ಮ ಮುಂದಿದೆ.

ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಪೋಷಕರ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಮಹತ್ವವಿದೆ. ಫೀಸ್ ಕಟ್ಟುವ ಪೋಷಕರು ತಾವು ಕಟ್ಟುವ ಹಣಕ್ಕೆ ತಕ್ಕ ಸೌಲಭ್ಯಗಳು, ಗುಣಮಟ್ಟದ ಕಲಿಕೆ ತಮ್ಮ ಮಕ್ಕಳಿಗೆ ಖಾತರಿ ಪಡಿಸುವತ್ತ ಶಾಲೆಯ ಆಡಳಿತದ ಜೊತೆ ಹೆಚ್ಚಿನ ಸಮನ್ವಯ ಹೊಂದುವ ಅವಕಾಶಗಳನ್ನು ಹೊಂದಿದ್ದಾರೆ. ಇಂತಹದೊಂದು ಸಾಧ್ಯತೆ ಕನ್ನಡ ಮಾಧ್ಯಮದ, ವಿಶೇಷವಾಗಿ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಲ್ಲೂ ವ್ಯವಸ್ಥಿತವಾಗಿ ದೊರೆಯಬೇಕಿದೆ. ಕನ್ನಡ ಮಾಧ್ಯಮದ ಬಗ್ಗೆ ಗಟ್ಟಿಯಾದ ನಂಬಿಕೆಯಿದ್ದು, ಕನ್ನಡ ಮಾಧ್ಯಮದಲ್ಲೇ ಗುಣಮಟ್ಟದ ಕಲಿಕೆ ಕೊಡಲು, ಎಲ್ಲ ರೀತಿಯ ಪಠ್ಯ ಮತ್ತು ಪಠ್ಯತೇರ ಚಟುವಟಿಕೆಗಳನ್ನು ಕಲ್ಪಿಸಲು ತಗಲುವ ತಕ್ಕ ದರವನ್ನು ತೆರಲು ಸಿದ್ಧವಿರುವ ಸಾವಿರಾರು ಪೋಷಕರು ಕರ್ನಾಟಕದಲ್ಲಿದ್ದಾರೆ. ಶಾಲೆಗಳಲ್ಲಿರುವ ಸವಲತ್ತು, ಸೌಕರ್ಯಗಳೇನು, ಶಾಲೆಗಳ ಬೇಡಿಕೆಗಳೇನು ಮತ್ತು ಪೋಷಕರಾಗಿ ಶಾಲೆಗಳಿಂದ ತಮಗಿರುವ ನಿರೀಕ್ಷೆಗಳೇನು ಅನ್ನುವ ಬಗ್ಗೆ ಶಾಲೆಗಳ ಆಡಳಿತ ವರ್ಗದ ಜೊತೆ ಕೂತು ಚರ್ಚಿಸುವ ಮತ್ತು ತಕ್ಕ ಪರಿಹಾರದ ಕ್ರಮಗಳನ್ನು ರೂಪಿಸಿಕೊಳ್ಳುವ ವ್ಯವಸ್ಥೆಯೊಂದು ಇಂದು ಏರ್ಪಡಬೇಕಿದೆ. ಇದು ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳನ್ನು ಬಲಪಡಿಸಿಕೊಳ್ಳುವತ್ತ ಒಂದು ಪ್ರಮುಖ ಹೆಜ್ಜೆಯಾಗಬಹುದು.

ಬನ್ನಿ, ಚರ್ಚಿಸೋಣ

ಅಂತಹದೊಂದು ಪ್ರಯತ್ನ ಮೇ ಒಂದರಂದು ಬೆಂಗಳೂರಿನ ತ್ಯಾಗರಾಜನಗರದ ಬಿ,ಎಂ.ಶ್ರೀ ಪ್ರತಿಷ್ಟಾನದಲ್ಲಿ ಬೆಳಿಗ್ಗೆ 11ಕ್ಕೆ ನಡೆಯKMS Poshakara Sabhe Inviteಲಿದೆ. ಬೆಂಗಳೂರಿನ ಹಲವು ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳ ಆಡಳಿತ ವರ್ಗದ ಪ್ರತಿನಿಧಿಗಳು ಮತ್ತು ಕನ್ನಡ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿರುವ, ಓದಿಸಬೇಕೆಂದಿರುವ, ಓದಿಸುವ ಆಸೆ ಹೊಂದಿದ್ದು, ಹಲವು ಪ್ರಶ್ನೆಗಳನ್ನು ಹೊಂದಿರುವ ಬೆಂಗಳೂರಿನ ಎಲ್ಲ ಪೋಷಕರಿಗೂ ಇಲ್ಲಿ ಮುಕ್ತ ಸ್ವಾಗತವಿದೆ. ಈ ಸಭೆಯಲ್ಲಿ ಪಾಲ್ಗೊಳ್ಳುವ ಆಸಕ್ತಿ ಹೊಂದಿರುವವರು ಪ್ರಿಯಾಂಕ್ ಕತ್ತಲಗಿರಿ ಅವರನ್ನು 9972744665 ಮೊಬೈಲ್ ಸಂಖ್ಯೆಯಲ್ಲಿ ಇಲ್ಲವೇ Priyank.ks@gmail.com ಮಿಂಚೆ ವಿಳಾಸದಲ್ಲಿ ಸಂಪರ್ಕಿಸಬಹುದು. ಎಲ್ಲದಕ್ಕೂ ಸರ್ಕಾರವನ್ನೇ ನೋಡುತ್ತ ಕೂರುವ ಬದಲು ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ, ಮೇಲ್ದರ್ಜೆಗೇರಿಸುವ, ಶಾಲೆಗಳಲ್ಲಿ ನೊಂದಾವಣೆ ಹೆಚ್ಚಿಸಿಕೊಳ್ಳುವ ಇಂತಹ ಪ್ರಯತ್ನ ಯಶಸ್ವಿಯಾದರೆ ಕನ್ನಡ ಮಾಧ್ಯಮದ ಬಗೆಹರಿಯದ ಪ್ರಶ್ನೆಗೆ ಹೊಸತೊಂದು ಉತ್ತರ ಕೆಲ ವರ್ಷಗಳಲ್ಲಿ ದಕ್ಕಬಹುದು.

ತಾಯ್ನುಡಿಯಲ್ಲಿ ಕಲಿಸುವುದು ಮಕ್ಕಳ ಕಲಿಕೆಗೆ ಪೂರಕ

17_telangana_schoo_1953501f

ಚಿತ್ರ ಸೆಲೆ : http://www.thehindu.com

ಕಳೆದ ವರುಷವಷ್ಟೇ ಹೊಸದಾಗಿ ಮೂಡಿದ ತೆಲಂಗಾಣ ರಾಜ್ಯದಲ್ಲಿ ಶಿಕ್ಷಣದ ರೂಪುರೇಷೆಯ ಕುರಿತು ಚರ್ಚೆಗಳು ಏರ್ಪಡುತ್ತಾ ಬಂದಿದ್ದು ಹಲವು ತಿಂಗಳುಗಳಿಂದ ಸುದ್ದಿಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕಲಿಕಾ ಮಾಧ್ಯಮದ ಕುರಿತಂತೆ ಹಲವಾರು ಚರ್ಚೆಗಳು ನಡೆಯುತ್ತಿವೆ. ತೆಲಂಗಾಣ ರಾಜ್ಯದ ಜನರ ಏಳಿಗೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆಯಾಗಬೇಕು ಅನ್ನುವುದು ತೆಲಂಗಾಣ ಸರ್ಕಾರದ ನಿಲುವಾಗಿದೆ. ಹಾಗಾಗಿ ಬರುವ ವರುಷದಿಂದ ಸರ್ಕಾರವೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದಾಗಿ ತಿಳಿಸಿದೆ. ತೆಲಂಗಾಣ ರಾಜ್ಯದ ಮನಸ್ಥಿತಿ ನೆರೆಯ ಕನ್ನಡಿಗರ ಅಥವಾ ವಸಾಹತುಶಾಹಿ ಆಳ್ವಿಕೆಗೆ ಒಳಪಟ್ಟ ಇತರ ಹಿಂದುಳಿದ ಆಫ್ರಿಕಾದ ದೇಶಗಳಿಗಿಂತ ಬೇರೆಯಾಗಿಲ್ಲ ಅನ್ನುವುದು ಇಲ್ಲಿ ತಿಳಿಯಾಗಿ ಕಾಣುತ್ತದೆ. ವೈಜ್ಞಾನಿಕವಾಗಿ ತಾಯ್ನುಡಿಯಲ್ಲಿ ಕಲಿಯುವುದೇ ಮೇಲು ಎಂದು ಒಪ್ಪಿತವಾಗಿದ್ದರೂ ಇಂಗ್ಲೀಶ್ ಮಾಧ್ಯಮ ಶಿಕ್ಷಣ ವ್ಯವಸ್ಥೆಯು ಇಷ್ಟು ಬಲವಾದ ಬೆಂಬಲ ಪಡೆದುಕೊಂಡಿರುವುದು ಕಳೆದ 25 ವರುಶಗಳಿಂದ ಬಿರುಸುಗೊಂಡಿರುವ ಒಂದು ಬದಲಾವಣೆಯಾಗಿದೆ. ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಹೊರಗುತ್ತಿಗೆಯಾಗಿ ಭಾರತಕ್ಕೆ ಬಂದಿರುವ ಕೆಲಸಗಳು ಹೆಚ್ಚಾಗಿ ಇಂಗ್ಲಿಷ್ ತಿಳುವಳಿಕೆ ಕೇಳುತ್ತಿವೆ. ಇಂಗ್ಲಿಷ್ ಕಲಿಯುವುದು ಎಂದರೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದು ಎಂಬ ತಪ್ಪು ನಂಬಿಕೆ ನಮ್ಮ ಸಮಾಜದಲ್ಲಿ ಇರುವುದರಿಂದ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚು ಬೇಡಿಕೆ ಒದಗಿದೆ. ಅಲ್ಲದೇ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿಸುವುದೇ ಅತ್ಯುತ್ತಮ ಕಲಿಕೆ ಅನ್ನುವ ನಂಬಿಕೆಯೂ ಹಲವರಲ್ಲಿ ಬೇರೂರಿದೆ. ಆದರೆ ತಾಯ್ನುಡಿಯ ಮಾಧ್ಯಮದಲ್ಲಿ ಕಲಿತ ಮಕ್ಕಳ ಗುಣಮಟ್ಟವನ್ನು ಒರೆಗೆ ಹಚ್ಚಿದ ಇತ್ತೀಚಿನ ಸಮೀಕ್ಷೆಯೊಂದು ಈ ನಂಬಿಕೆಯನ್ನು ತಪ್ಪುನಂಬಿಕೆ ಎಂದು ತೋರಿಸಿಕೊಡುತ್ತಿದೆ.

ಜಗತ್ತಿನಾದ್ಯಂತ ಎಲ್ಲಾ ನಾಡುಗಳ ಮಕ್ಕಳ ಮೂಲಭೂತ ಹಕ್ಕುಗಳು ಮತ್ತು ಏಳಿಗೆಗೆ ದುಡಿಯುವ ಸಂಸ್ಥೆಯೇ ಯುನಿಸೆಫ್ (UNICEF). CESS-UNICEF (Center for Economic and Social Studies) ನಲ್ಲಿ ಮಕ್ಕಳ ಕಲಿಕೆಯ ವಿಭಾಗದಲ್ಲಿ ಸಲಹಾಕಾರರಾಗಿರುವ ಪಿ. ಶ್ರೀಕುಮಾರ್ ನಾಯರ್ ಅವರು “ಕಲಿಕಾ ಮಾಧ್ಯಮವು ಮಕ್ಕಳ ಕಲಿಕೆಯ ಮೇಲೆ ಪ್ರಭಾವ ಬೀರುವುದೇ?” (Does Medium of Instruction Affect Learning Outcomes?) ಎಂಬ ವಿಷಯವಾಗಿ ಸಂಶೋಧನೆ ನಡೆಸಿ ಇತ್ತೀಚಿಗೆ ವರದಿಯೊಂದನ್ನು ಪ್ರಕಟಿಸಿದರು. ತಮ್ಮ ಸಂಶೋಧನೆಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 233 ಶಾಲೆಗಳಿಂದ ಒಟ್ಟು 900ಕ್ಕೂ ಹೆಚ್ಚು ಇಂಗ್ಲಿಷ್ ಮತ್ತು ತೆಲುಗು ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ ಎಂದು ಅವರ ವರದಿಯಲ್ಲಿ ತಿಳಿಸಿದ್ದಾರೆ. ಮಗುವೊಂದರ ಕಲಿಕೆಯ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ. ಮನೆಯ ವಾತಾವರಣ, ತಾಯ್ತಂದೆಯರ ಕಲಿಕೆಯ ಮಟ್ಟ, ಸಾಮಾಜಿಕ ಮತ್ತು ಹಣಕಾಸಿನ ಮಟ್ಟ, ಶಾಲೆಯಲ್ಲಿ ಕಲಿಸುವ ಶಿಕ್ಷಕರ ಗುಣಮಟ್ಟ, ಶಾಲೆಯ ಪರಿಸರ, ಹೀಗೆ ಹತ್ತು ಹಲವು ವಿಷಯಗಳಿಂದ ಮಕ್ಕಳ ಕಲಿಕೆ ರೂಪಗೊಂಡಿರುತ್ತದೆ. ಶ್ರೀಕುಮಾರ್ ಅವರು ನಡೆಸಿರುವ ಈ ಸಂಶೋಧನೆಯ ಹೆಚ್ಚುಗಾರಿಕೆ ಏನೆಂದರೆ, ಕಲಿಕೆಯ ಮೇಲೆ ಪರಿಣಾಮ ಉಂಟುಮಾಡಬಲ್ಲ ಬೇರೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಲಿಕಾ ಮಾಧ್ಯಮವನ್ನು ಮಾತ್ರ ವ್ಯತ್ಯಾಸವಾಗಿಟ್ಟುಕೊಂಡು ಮಕ್ಕಳ ಕಲಿಕೆಯ ಮಟ್ಟವನ್ನು ಇಲ್ಲಿ ಅಳೆಯಲಾಗಿದೆ. ಅವರು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಂತೆ ಚಿಕ್ಕಂದಿನಲ್ಲಿ ತಮ್ಮ ತಾಯ್ನುಡಿಯಲ್ಲಿ ಕಲಿತ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳಿಗಿಂತ ಗಣಿತದಲ್ಲಿ ಮುಂದಿರುವುದನ್ನು ಗುರುತಿಸಿದ್ದಾರೆ. ಜಗತ್ತಿನಾದ್ಯಂತ ಕಲಿಕಾ ಮಾಧ್ಯಮಕ್ಕೆ ಕುರಿತಂತೆ ನಡೆಸಲಾಗಿರುವ ಇತರ ಸಂಶೋಧನೆಗಳಲ್ಲಿ ಕಾಣುವಂತೆಯೇ ಇಲ್ಲಿಯೂ ತಾಯ್ನುಡಿಯಲ್ಲಿ ಕಲಿತ ಮಕ್ಕಳು ಮುಂದಿದ್ದಾರೆ. ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವ ತೆಲಂಗಾಣ ಸರ್ಕಾರ ಅದಕ್ಕೆ ಬೇಕಾದ ಶಿಕ್ಷಕರನ್ನು ತಯಾರು ಮಾಡಬೇಕಾದರೆ ಹತ್ತಾರು ವರುಶ ಬೇಕಾಗಬಹುದು. ಏಕೆಂದರೆ ತೆಲಂಗಾಣದ ಶಿಕ್ಷಣ ಇಲಾಖೆಯೇ ಹೇಳಿರುವಂತೆ ತೆಲಂಗಾಣದ ಬಹುತೇಕ ಶಿಕ್ಷಕರ ಇಂಗ್ಲಿಷ್ ಮಟ್ಟ ಮಕ್ಕಳಿಗೆ ಇಂಗ್ಲಿಷ್ ಮಾಧ್ಯದಲ್ಲಿ ಕಲಿಸಲು ಸಾಲುವುದಿಲ್ಲ ಮತ್ತು ಅವರಿಗೆ ಇಂಗ್ಲಿಷ್ ನುಡಿಯ ವಿಶೇಷ ತರಬೇತಿ ನೀಡಬೇಕಾಗುತ್ತದೆ. ಇಂಗ್ಲಿಷ್ ನುಡಿಯು ಪರಿಸರದ ನುಡಿಯಾಗಿರದ ಯಾವುದೇ ನಾಡಿನಲ್ಲಿ ಇದು ಸಹಜ. ಇಂತಹ ನಾಡುಗಳಲ್ಲಿ ಶಿಕ್ಷಕರಿಗೆ ಚನ್ನಾಗಿ ಇಂಗ್ಲಿಷ್ ತರಬೇತಿ ಕೊಟ್ಟು, ಇಂಗ್ಲೀಷಿನಲ್ಲಿ ಕಲಿಸುವ ಪಾಠವನ್ನು ತಿಳಿಯುವ ಮಟ್ಟಕ್ಕೆ ಮಕ್ಕಳಿಗೆ ಇಂಗ್ಲಿಷ್ ಕಲಿಸಿ ಗೆಲ್ಲಬೇಕಾದ ಬೆಟ್ಟದಂತಹ ಕೆಲಸ ಸರ್ಕಾರದ ಮುಂದಿರುತ್ತದೆ. ಈ ಉದಾಹರಣೆ ಕರ್ನಾಟಕಕ್ಕೂ ಸಲ್ಲುತ್ತದೆ. ಕಲಿಯುವವರಿಗೂ ಕಲಿಸುವವರಿಗೂ ಇಬ್ಬರಿಗೂ ಚನ್ನಾಗಿ ಗೊತ್ತಿರುವ ಪರಿಸರದ ನುಡಿಯಲ್ಲಿ ಅತ್ಯುತ್ತಮ ಗುಣಮಟ್ಟದ ಕಲಿಕೆಯೇರ್ಪಾಡು ಮಾಡುವುದು ಸರಳವಾದ ಗೆಲುವಿನ ಮಂತ್ರ.ಈ ಮಂತ್ರವನ್ನು ಅಳವಡಿಸಿಕೊಂಡ ಎಲ್ಲಾ ಮುಂದುವರೆದ ನಾಡುಗಳೂ ಏಳಿಗೆ ಹೊಂದಿವೆ.

ಇಂದಿನ ಜಾಗತಿಕ ಪೈಪೋಟಿಯನ್ನು ಎದುರಿಸಲು ನಮ್ಮ ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಅವಶ್ಯಕ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂಗ್ಲಿಷ್ ನುಡಿಯನ್ನು ಕಲಿಸುವುದು ಮತ್ತು ವಿಜ್ಞಾನದ ವಿಷಯಗಳನ್ನು ಇಂಗ್ಲಿಷ್ ನುಡಿಯಲ್ಲಿ ಕಲಿಸುವುದು ಎರಡೂ ಬೇರೆಯೇ ಆಗಿದೆ. ಮಕ್ಕಳು ವಿಷಯಗಳ ತಿರುಳನ್ನು ಚನ್ನಾಗಿ ಕಲಿಯಬೇಕಾದರೆ ಅವರಿಗೆ ತಮ್ಮ ತಾಯ್ನುಡಿಯಲ್ಲೇ ಕಲಿಸಬೇಕು ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಅಲ್ಲದೇ ತಾಯ್ನುಡಿಯನ್ನು ಮೊದಲು ಚನ್ನಾಗಿ ಕಲಿಯುವುದೇ ಇಂಗ್ಲಿಷ್ ಕಲಿಕೆಗೆ ಗಟ್ಟಿ ಬುನಾದಿಯಾಗಿದೆ.

ತಾಯ್ನುಡಿಯಲ್ಲಿ ಕಲಿತ ಮಕ್ಕಳು ಗಣಿತದಲ್ಲಿ ಮುಂದು

ಚಿತ್ರ ಸೆಲೆ : http://media.newindianexpress.com/

ಚಿತ್ರ ಸೆಲೆ : http://media.newindianexpress.com/

CESS-UNICEF (Center for Economic and Social Studies) ನಲ್ಲಿ ಮಕ್ಕಳ ಕಲಿಕೆಯ ವಿಭಾಗದಲ್ಲಿ ಸಲಹಾಕಾರರಾಗಿರುವ ಪಿ. ಶ್ರೀಕುಮಾರ್ ನಾಯರ್ ಅವರು “ಕಲಿಕಾ ಮಾಧ್ಯಮವು ಮಕ್ಕಳ ಕಲಿಕೆಯ ಮೇಲೆ ಪ್ರಭಾವ ಬೀರುವುದೇ?” (Does Medium of Instruction Affect Learning Outcomes?) ಎಂಬ ವಿಷಯವಾಗಿ ಸಂಶೋಧನೆ ನಡೆಸಿ ವರದಿಯೊಂದನ್ನು ಪ್ರಕಟಿಸಿದ್ದಾರೆ. (ವರದಿಯ ಸೆಲೆಗೆ ಇಲ್ಲಿ ಕ್ಲಿಕ್ ಮಾಡಿ) ಅವರು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಂತೆ ಎಳವೆಯಲ್ಲಿ ತಾಯ್ನುಡಿಯಲ್ಲಿ ಕಲಿತ ಮಕ್ಕಳು ಗಣಿತದಲ್ಲಿ ಮುಂದಿರುವುದನ್ನು ಗುರುತಿಸಿದ್ದಾರೆ.

ತಮ್ಮ ಸಂಶೋಧನೆಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 233 ಶಾಲೆಗಳಿಂದ ಒಟ್ಟು 900ಕ್ಕೂ ಹೆಚ್ಚು ಇಂಗ್ಲಿಷ್ ಮತ್ತು ತೆಲುಗು ಮಾಧ್ಯಮದಲ್ಲಿ ಕಲಿಯುವ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮಗುವೊಂದರ ಕಲಿಕೆಯ ಮೇಲೆ ಪ್ರಭಾವ ಬೀರಬಲ್ಲ ಹಲವಾರು ಅಂಶಗಳು ಇರುತ್ತವೆ. ಮನೆಯ ವಾತಾವರಣ, ತಾಯ್ತಂದೆಯರ ಕಲಿಕೆಯ ಮಟ್ಟ, ಸಾಮಾಜಿಕ ಮತ್ತು ಹಣಕಾಸಿನ ಮಟ್ಟ, ಹೀಗೆ ಹತ್ತು ಹಲವು ವಿಷಯಗಳಿಂದ ಮಕ್ಕಳ ಕಲಿಕೆ ರೂಪಗೊಂಡಿರುತ್ತದೆ. ಶ್ರೀಕುಮಾರ್ ಅವರು ನಡೆಸಿರುವ ಈ ಅರಕೆಯ ಹೆಚ್ಚುಗಾರಿಕೆ ಏನೆಂದರೆ, ಕಲಿಕೆಯ ಮೇಲೆ ಪರಿಣಾಮ ಉಂಟುಮಾಡಬಲ್ಲ ಬೇರೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಲಿಕಾ ಮಾಧ್ಯಮವನ್ನು ಮಾತ್ರ ವ್ಯತ್ಯಾಸವಾಗಿಟ್ಟುಕೊಂಡು ಮಕ್ಕಳ ಕಲಿಕೆಯ ಮಟ್ಟವನ್ನು ಅಳೆಯಲಾಗಿದೆ.

ತಾಯ್ನುಡಿ ಕಲಿಕೆಯಿಂದ ಇಂಗ್ಲೀಶ್ ಕಲಿಕೆ ಸುಲಭ

676x380

ಚಿತ್ರ ಸೆಲೆ : http://goo.gl/W7GldM

ಮಕ್ಕಳ ಕಲಿಕೆ ಮುಂದಿನ ಪೀಳಿಗೆಗೆ ಬುನಾದಿಯಂತೆ. ಅವರ  ನಡೆ-ನುಡಿ-ತಿಳಿವು-ದುಡಿಮೆ ಎಲ್ಲವೂ ಕಲಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ತಾಯ್ತಂದೆಯರಿಗೆ ಮಕ್ಕಳ ಕಲಿಕೆಯ ಬಗ್ಗೆ ಹೆಚ್ಚಿನ ಗಮನ ಇರುತ್ತದೆ. ಈಗಿನ ನಮ್ಮ ಸಮಾಜದಲ್ಲಿ ಹಲವರಲ್ಲಿ ಕಲಿಕೆಯ ಮಾಧ್ಯಮದ ಬಗ್ಗೆ ಅನುಮಾನಗಳಿವೆ. ಇಂಗ್ಲೀಶ್ ಮಾಧ್ಯಮ ಉತ್ತಮವೋ ಅಥವಾ ಕನ್ನಡ ಮಾಧ್ಯಮ ಉತ್ತಮವೋ ಅನ್ನುವ ಗೊಂದಲಕ್ಕೆ ಬಿದ್ದು ಕಡೆಗೆ ಕೆಲವರು ಎಲ್ಲರೂ ಏನು ಮಾಡುತ್ತಾರೋ ನಾನೂ ಅದನ್ನೇ ಮಾಡುತ್ತೇನೆ ಅನ್ನುತ್ತಾ ತಮ್ಮ ಅಕ್ಕಪಕ್ಕದ ಮನೆಯವರನ್ನು ನೋಡಿ ತಮ್ಮ ಮಗುವನ್ನೂ ಇಂಗ್ಲೀಶ್ ಶಾಲೆಗೇ ಸೇರಿಸುತ್ತಾರೆ. ಕೆಲವರು ತಾಯ್ನುಡಿ ಕಲಿಕೆಯ ಮಹತ್ವ ತಿಳಿದು ಕನ್ನಡದಲ್ಲೇ ಓದಿಸುತ್ತಾರೆ. ಹೆಚ್ಚಿನ ಫೀಸು ತೆರಲಾಗದ ವರ್ಗದ ಜನರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ, ಅಲ್ಲಿ ತಾಯ್ನುಡಿ ಕಲಿಕೆಯೇ ಇರುತ್ತದೆ.

ಈ ಪರಿಸ್ಥಿತಿ ಇರುವುದು ನಮ್ಮ ಸಮಾಜದಲ್ಲಿ ಮಾತ್ರವಲ್ಲ; ತೆಂಕಣ ಆಫ್ರಿಕಾದಲ್ಲೂ ಇದೇ ಪರಿಸ್ಥಿತಿ ಒದಗಿದೆ. ಈ ನಿಟ್ಟಿನಲ್ಲಿ ಅಲ್ಲಿ ನಡೆಸಿದ ಸಮೀಕ್ಷೆಯೊಂದರ ಬಗ್ಗೆ ಓದಿದೆ: (http://goo.gl/W7GldM).  ಅಲ್ಲಿ ನಡೆದದ್ದೇನು? ಬನ್ನಿ ತಿಳಿದುಕೊಳ್ಳೋಣ.

ಸದ್ಯದಲ್ಲಿ ತೆಂಕಣ ಆಫ್ರಿಕಾದಲ್ಲಿ ನೂರಕ್ಕೆ 60 ಮಕ್ಕಳು ಒಂದರಿಂದ ಮೂರನೇ ತರಗತಿಯವರೆಗೆ ಅಲ್ಲಿಯ ನುಡಿಯಾದ “ಆಫ್ರಿಕಾನ್ಸ್”ನಲ್ಲಿಯೇ ಕಲಿಯುತ್ತಾರೆ. ನಾಲ್ಕನೇ ತರಗತಿಗೆ ಇಂಗ್ಲಿಶ್ ಮಾಧ್ಯಮದ ಕಲಿಕೆಗೆ ಸರಿಯುತ್ತಾರೆ. ಉಳಿದವರು ಮೊದಲ ತರಗತಿಯಿಂದಲೇ ಇಂಗ್ಲೀಶ್‍ನಲ್ಲಿ ಕಲಿಯುತ್ತಾರೆ.

ಇತ್ತೀಚಿಗೆ ತೆಂಕಣ ಆಫ್ರಿಕಾದ ಮಕ್ಕಳು ಯಾವ ನುಡಿಯಲ್ಲಿ ಕಲಿಯಬೇಕು ಅನ್ನುವ ಬಗ್ಗೆ ಅನುಮಾನಗಳು ಹುಟ್ಟಿದವು ಮತ್ತು ಚರ್ಚೆಯೂ ನಡೆಯಿತು. ಆಗ ಪ್ರೊಫೆಸರ್ ಜಾನತನ್  ಜಾನ್ಸನ್ ಅವರು “ಮಕ್ಕಳಿಗೆ ಚಿಕ್ಕ ತರಗತಿಯಿಂದಲೇ ಇಂಗ್ಲಿಶ್ ಮಾಧ್ಯಮದಲ್ಲಿ ಕಲಿಸಿದರೆ ಇಂಗ್ಲೀಶ್ ಚನ್ನಾಗಿ ಕಲಿಯುತ್ತಾರೆ, ಹಾಗೂ ಇದು ಆಫ್ರಿಕಾದ ಕಪ್ಪು ಜನರ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಅಗತ್ಯ” ಎಂಬ ಅನಿಸಿಕೆ ನೀಡುತ್ತಾರೆ.

ಆದರೆ ನುಡಿಯರಿಮೆ (linguistic science) ಈ ಮಾತನ್ನು ಒಪ್ಪುವುದಿಲ್ಲ. ಈ ಅರಿಮೆಯ ಪ್ರಕಾರ ಒಂದು ಮಗು ತನ್ನ ತಾಯ್ನುಡಿಯಲ್ಲದ ಯಾವುದೇ ಬೇರೆ ನುಡಿಯನ್ನು ಕಲಿಯುವುದಕ್ಕೆ ಮುನ್ನ ತನ್ನ ತಾಯ್ನುಡಿಯ ಅಡಿಪಾಯ ಗಟ್ಟಿಯಾಗಿರಬೇಕು ಎನ್ನುತ್ತದೆ. ಆಗಲೇ ಎರಡನೇ ನುಡಿಯ ಕಲಿಕೆ ಸರಾಗ ಎಂದು ಸಾರುತ್ತದೆ. ಇದನ್ನು ಒರೆಗೆ ಹಚ್ಚಿ ನೋಡುವ ಸಲುವಾಗಿ ಮಾಹಿತಿ ಕಲೆಹಾಕಲು ಒಂದು ಸಮೀಕ್ಷೆ ನಡೆಸಲಾಯಿತು.

ಮೊದಲಿಗೆ 2007 ರಿಂದ 2011 ರ ವರೆಗೆ ಓದಿದ ಮಕ್ಕಳ ಕಲಿಕೆಯ ಮಾಧ್ಯಮದ ಮಾಹಿತಿ ಕಲೆ ಹಾಕಲಾಯಿತು. ನಂತರ 2012ರಲ್ಲಿ ನಡೆಸಲಾದ ಒಂದರಿಂದ ಆರನೇ ತರಗತಿಯವರೆಗಿನ ಪರೀಕ್ಷೆಗಳ ಅಂಕಗಳನ್ನು ಕಲೆಹಾಕಲಾಯಿತು. ಇದರೊಂದಿಗೆ ಶಾಲೆಯ ಗುಣಮಟ್ಟ, ಮನೆಯ ವಾತಾವರಣ, ತಾಯ್ನುಡಿ ಕಲಿಕೆಯ ಪ್ರಭಾವ ಇವೆಲ್ಲವನ್ನೂ ಪರಿಗಣಿಸಲಾಯಿತು. ಸುಮಾರು 9000 ಶಾಲೆಗಳನ್ನು ಸಮೀಕ್ಷೆಯಲ್ಲಿ ಪರಿಗಣಿಸಲಾಯಿತು. ಅಲ್ಲಿ ಕಂಡುಕೊಂಡ ಸತ್ಯ ಏನು ಗೊತ್ತೇ?

ತಾಯ್ನುಡಿಯಲ್ಲಿ ಒಂದರಿಂದ ಮೂರನೇ ತರಗತಿವರೆಗೆ ಓದಿದ ಮಕ್ಕಳಲ್ಲಿ ಮುಂದಿನ ತರಗತಿಗಳಲ್ಲಿ (4 – 6) ಇಂಗ್ಲೀಶ್ ಕಲಿಕೆ ಇಂಗ್ಲೀಶ್ ಮಾಧ್ಯಮದ ಮಕ್ಕಳ ಕಲಿಕೆಗಿಂತ ಉತ್ತಮವಾಗಿತ್ತು! ಈ ಎಲ್ಲ ಮಕ್ಕಳ ಶಾಲೆಯ ಗುಣಮಟ್ಟ, ಮನೆಯ ವಾತಾವರಣ ಒ೦ದೆ ತೆರನಾಗಿದ್ದು ಕಲಿಕೆಯ ಮಾಧ್ಯಮ ಒಂದೇ ಇವರಲ್ಲಿನ ಬೇರ್ಮೆಯಾಗಿತ್ತು. ಈ ಮೂಲಕ ತೆಂಕಣ ಆಫ್ರಿಕಾದವರು ಕಂಡುಕೊಂಡಿದ್ದೇನೆಂದರೆ, ಮಕ್ಕಳ ಮೊದಲ ಹಂತದ ಕಲಿಕೆಯು ಅವರ ತಾಯ್ನುಡಿಯಲ್ಲಿ ನಡೆದರೇನೇ ಉತ್ತಮ. ಮೊದಲ ಹಂತದ ಕಲಿಕೆಯ ಅಡಿಪಾಯ ಅವರ ತಾಯ್ನುಡಿಯಲ್ಲಿ ನಡೆದರೆ, ಮುಂದಿನ ತರಗತಿಗಳಲ್ಲಿ ಅವರು ಇಂಗ್ಲೀಶ್ ನುಡಿಯನ್ನೂ ಚೆನ್ನಾಗಿ ಕಲಿಯಬಲ್ಲರು. ಮೊದಲ ಹಂತದಿಂದಲೇ ಇಂಗ್ಲೀಶ್ ಮಾಧ್ಯಮದ ಕಲಿಕೆಗೆ ಒಳಪಡುವ ಮಕ್ಕಳು, ಇಂಗ್ಲೀಶಿನ ಕಲಿಕೆಯಲ್ಲೂ ಹಿಂದೆ ಬೀಳುವ ಸಾಧ್ಯತೆ ಹೆಚ್ಚು.

ಚಿಕ್ಕ ತರಗತಿಗಳಿಂದಲೇ ಇಂಗ್ಲೀಶ್ ನುಡಿಯನ್ನು ಕೇವಲ ಒಂದು ವಿಷಯವಾಗಿ (ಕಲಿಕೆ ಮಾಧ್ಯಮ ಮಾಡದೇ) ಕಲಿಸುವುದು ಉತ್ತಮ ಎಂದೂ ಈ ಸಮೀಕ್ಷೆಯಲ್ಲಿ ಅಭಿಪ್ರಾಯ ಪಡಲಾಗಿದೆ.

ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಪರಿಹಾರವಲ್ಲ

(ಕಲಿಕೆಯ ಮಾಧ್ಯಮವಾಗಿ ಇಂಗ್ಲೀಶ್ ಬಳಸುವ ಬಗ್ಗೆ ವಸಂತ್ ಶೆಟ್ಟಿ ಅವರು ಬರೆದ ಓಲೆಯೊಂದು ಉದಯವಾಣಿ ಪತ್ರಿಕೆಯಲ್ಲಿ ಮೂಡಿ ಬಂದಿತ್ತು. ಆ ಓಲೆಯಲ್ಲಿನ ವಿಚಾರಗಳನ್ನು ನಮ್ಮ ಓದುಗರ ಮುಂದಿಡಲು, ಸೂಕ್ತ ಬದಲಾವಣೆಗಳೊಂದಿಗೆ ಇಲ್ಲಿಯೂ ಅವರ ಬರಹವನ್ನು ಹಂಚಿಕೊಳ್ಳಲಾಗಿದೆ)

_64401602_schoolchildren_slates_afp62

ಚಿತ್ರ ಸೆಲೆ : http://www.bbc.com/news/magazine

ಇಂಗ್ಲಿಷ್ ಮಾಧ್ಯಮ ಬಡವರ ಪಾಲಿನ ಕಾಮಧೇನು ಅನ್ನುವ ರೀತಿಯ ವಾದವನ್ನು ವೈಜ್ಞಾನಿಕವಾದ ಕಾರಣಗಳಿಂದ ನಾನು ಒಪ್ಪುವುದಿಲ್ಲ. ಅದನ್ನು ಒಪ್ಪದಿರಲು ಇರುವ ಕಾರಣಗಳು ಇಂತಿವೆ:

ಜಗತ್ತಿನ ಅಭಿವೃದ್ಧಿ ಹೊಂದಿರುವ ಎಲ್ಲ ದೇಶಗಳು ತಾಯ್ನುಡಿಯ ಸುತ್ತಲೇ ತಮ್ಮ ಕಲಿಕೆಯನ್ನು ರೂಪಿಸಿಕೊಂಡಿದ್ದು, ಆ ಗಟ್ಟಿ ತಳಹದಿಯ ಮೇಲೆ ಕಟ್ಟಿಕೊಂಡಿರುವ ಆರ್ಥಿಕ ವ್ಯವಸ್ಥೆಯಿಂದಲೇ ಆ ದೇಶಗಳು ಅಭಿವೃದ್ಧಿ ಹೊಂದಿವೆ. ತನ್ನ ತಾಯ್ನುಡಿ ಬಿಟ್ಟು ಇನ್ನೊಂದು ನುಡಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ಒಂದೇ ಒಂದು ದೇಶವೂ ಜಗತ್ತಿನಲ್ಲಿ ಏಳಿಗೆ ಹೊಂದಿದ ದೇಶವಾಗಿಲ್ಲ ಅನ್ನುವುದನ್ನು ಗಮನಿಸಬೇಕಿದೆ. ತಾಯ್ನುಡಿಯಲ್ಲಿ ಕಲಿಕೆ ಮಕ್ಕಳಲ್ಲಿ ಕಾನ್-ಸೆಪ್ಚುವಲ್ ಥಿಂಕಿಂಗ್ (ತಿರುಳು ತಿಳುವಳಿಕೆ) ಬೆಳೆಸುತ್ತೆ ಅನ್ನುವುದು ಜಗತ್ತಿನ ನೂರಾರು ವಿಜ್ಞಾನಿಗಳು, ಮನಶಾಸ್ತ್ರಜ್ಞರು, ಚಿಂತಕರು ಸಾರಿ ಸಾರಿ ಹೇಳಿರುವ ಸತ್ಯವಾಗಿದೆ. ವಿಶ್ವಸಂಸ್ಥೆ ಕೂಡಾ ಇದರ ಮಹತ್ವವನ್ನು ಸಾರುವ ಹಲವಾರು ಸಂಶೋಧನೆಗಳನ್ನು ಪ್ರಕಟಿಸಿದೆ.

ಕರ್ನಾಟಕದ ೮೩% ಶಾಲೆಗಳು ಸರ್ಕಾರಿ+ಸರ್ಕಾರಿ ಅನುದಾನಿತ ಶಾಲೆಗಳಾಗಿವೆ. ಇವೆಲ್ಲವೂ ಕನ್ನಡ ಮಾಧ್ಯಮದಲ್ಲೇ ನಡೆಯುತ್ತಿವೆ. ಇಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಈ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಬದಲಾಯಿಸಲು ಪ್ರತಿ ೩೦ ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಸುಮಾರು ೩-೩.೫ ಲಕ್ಷ ಇಂಗ್ಲಿಷ್ ಅನ್ನು ಚೆನ್ನಾಗಿ ಅರೆದು ಕುಡಿದಿರುವ ಶಿಕ್ಷಕರು ಬೇಕು. ಅವರನ್ನು ಎಲ್ಲಿಂದ ತರೋಣ? ಇಂಗ್ಲಿಶ್ ಇಲ್ಲಿನ ಮಕ್ಕಳ, ಹೆತ್ತವರ, ಈಗಿರುವ ಶಿಕ್ಷಕರ ಪರಿಸರದಲ್ಲಿಲ್ಲ. ಅಲ್ಲಿರುವುದು ಕನ್ನಡ. ಹೀಗಿರುವಾಗ ಪರಿಸರದ ನುಡಿಯಲ್ಲಿ ಕಲಿಸುವ ವ್ಯವಸ್ಥೆ ಚೆನ್ನಾಗಿ ರೂಪಿಸುವುದು ಸರಿಯಾದದ್ದೋ ಇಲ್ಲ ಅಲ್ಲೆಲ್ಲೂ ಇಲ್ಲದ ನುಡಿಯಲ್ಲಿ ಇದನ್ನು ಮಾಡಲು ಹೊರಡುವುದು ಸರಿಯಾದದ್ದೋ?

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ನುಡಿಯಾಗಿ ಒಂದನೇ ತರಗತಿಯಿಂದ ಕಲಿಸಲು ೨೦೦೭-೦೮ ರಿಂದಲೇ ಸರ್ಕಾರ ಶುರು ಮಾಡಿದೆ. ಆದರೆ ಆ ಪ್ರಯತ್ನ ಸಂಪೂರ್ಣವಾಗಿ ಸೋತಿದೆ ಅನ್ನುವ ವರದಿಗಳು ಬಂದಿವೆ. ರೀಜನಲ್ ಇನ್-ಸ್ಟಿಟ್ಯೂಟ್ ಆಫ್ ಇಂಗ್ಲಿಷ್, ದಕ್ಷಿಣಭಾರತದಲ್ಲಿ ಪ್ರಾಧ್ಯಾಪಕರಾಗಿರುವ ರವಿನಾರಾಯಣ್ ಚಕ್ರಕೋಡಿ ಅವರು ಈ ಬಗ್ಗೆ ನಡೆಸಿರುವ ಅಧ್ಯಯನದಲ್ಲಿ ಇಂಗ್ಲಿಷ್ ಒಂದು ನುಡಿಯಾಗಿ ಕಲಿಸುವ ಸಾಮರ್ಥ್ಯದ ಕೊರತೆ ಶಿಕ್ಷಕರಲ್ಲಿರುವುದೇ ಈ ವೈಫಲ್ಯಕ್ಕೆ ಮುಖ್ಯ ಕಾರಣ ಅನ್ನುವುದನ್ನು ಗುರುತಿಸಿದ್ದಾರೆ. ಹೀಗಿರುವಾಗ ಇದೇ ಶಿಕ್ಷಕರನ್ನು ಇಟ್ಟುಕೊಂಡು ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಸಲು ಮುಂದಾಗುತ್ತೇವೆ ಅನ್ನುವುದು ಮಕ್ಕಳ ಕಲಿಕೆಯ ಮೇಲೆ ಬೀರುವ ಪರಿಣಾಮಗಳನ್ನು ಊಹಿಸಿದ್ದಾರಾ? ಈಗ ತಕ್ಕ ಮಟ್ಟಿಗೆ ಕನ್ನಡದಲ್ಲಿ ಚೆನ್ನಾಗಿ ಕಲಿಯುತ್ತಿರುವ ಮಕ್ಕಳು ನಾಳೆ ಇಂಗ್ಲಿಶ್ ಬಾರದ ಈ ಶಿಕ್ಷಕರ ಕೈಯಲ್ಲಿ ಅತ್ತ ಕನ್ನಡವೂ ಬಾರದ ಇತ್ತ ಇಂಗ್ಲಿಶು ಬರದ ಎಡಬಿಡಂಗಿಗಳಾಗುವ ಸಾಧ್ಯತೆಯೇ ಹೆಚ್ಚು.

ಕಳೆದ ೨೫ ವರ್ಷದಿಂದ ಹೆಚ್ಚಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಬೆಂಗಳೂರಿನಂತಹ ಊರಿನಲ್ಲಿ ಏನಾಗಿದೆ? ಮಾತನಾಡುವಾಗ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ, ಕನ್ನಡ ಓದಲು ಬಾರದಿರುವುದು, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ ಅನ್ನುವಂತಹ ಕೀಳರಿಮೆ ಇಲ್ಲಿನ ಕನ್ನಡಿಗರಲ್ಲಿ ಹುಟ್ಟು ಹಾಕಿರುವುದು ಬಿಟ್ಟರೆ ಜಗತ್ತೇ ನಿಬ್ಬೆರಗಾಗುವಂತಹ ಸಾಧನೆಗಳು, ಪೇಟೆಂಟ್ ಗಳು ಒಂದಾದರೂ ಬೆಂಗಳೂರಿನಿಂದ ಬಂದಿವೆಯೇ? ಮೈಕ್ರೊಸಾಫ್ಟ್, ಆಪಲ್, ಮರ್ಸಿಡೀಸ್, ಸ್ಯಾಮ್ಸಂಗ್, ನೋಕಿಯಾದಂತಹ ಒಂದಾದರೂ ಕಂಪನಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಬೆಂಗಳೂರಿನ ಕನ್ನಡಿಗರಿಂದ ಬಂದಿದೆಯೇ? ನಿಜ ಹೇಳಬೇಕು ಅಂದರೆ ಕನ್ನಡ ಮಾಧ್ಯಮದಲ್ಲೇ ಕಲಿತ ನಾರಾಯಣ ಮೂರ್ತಿ ಅವರಿಂದ ಇನ್-ಫೋಸಿಸ್, ಕ್ಯಾಪ್ಟನ್ ಗೋಪಿನಾಥ್ ಅವರಿಂದ ಏರ್ ಡೆಕ್ಕನ್ ತರಹದ ಸಂಸ್ಥೆಗಳನ್ನು ಹುಟ್ಟಿಸಲು ಆಗಿದೆ ಅನ್ನುವುದು ಸಾಧಕರಾಗಲು ತಾಯ್ನುಡಿ ಶಿಕ್ಷಣದ ತಳಹದಿ ಎಷ್ಟು ಮುಖ್ಯ ಅನ್ನುವುದನ್ನು ಸಾರುತ್ತಿವೆ.

ನಾಳೆಯ ದಿನಗಳಲ್ಲಿ ಕನ್ನಡದಲ್ಲೂ ಉನ್ನತ ಶಿಕ್ಷಣ ಸಾಧ್ಯವಾಗಿಸಲು ಬೇಕಿರುವ ಸಮಯಾಧಾರಿತ ಕಾರ್ಯ ಯೋಜನೆಯೊಂದನ್ನು ರೂಪಿಸಿಕೊಂಡು ಅದಕ್ಕೆ ಬೇಕಿರುವ ಸಮಯ, ಹಣವನ್ನು ಆದ್ಯತೆಯ ಮೇರೆಗೆ ಕೊಡುವ ಕೆಲಸಕ್ಕೆ ಸರ್ಕಾರ ಕೈ ಹಾಕಬೇಕಿದೆ. ಅಂತಹದೊಂದು ವ್ಯವಸ್ಥೆ ಕಟ್ಟಿಕೊಳ್ಳುವವರೆಗೂ ಈಗಿರುವ ವ್ಯವಸ್ಥೆಯ ಲಾಭ ಪಡೆಯಲು ಇಂಗ್ಲಿಷ್ ಅನ್ನು ಒಂದು ಭಾಶೆಯಾಗಿ ಚೆನ್ನಾಗಿ ಕಲಿಸುವತ್ತ ಸರ್ಕಾರ ತನ್ನ ಗಮನ ಹರಿಸಲಿ. ಬೇಕಿದ್ದಲ್ಲಿ ಮೂರನೇ ಭಾಷೆಯಾಗಿ ಹಿಂದಿಯನ್ನು ಹೇರುವ ಬದಲು ಇಂಗ್ಲಿಷ್ ಅಡ್ವಾನ್ಸಡ್ ಅನ್ನುವ ಮಾತನಾಡುವ ಇಂಗ್ಲಿಶ್ ಕಲಿಸುವ ವಿಷಯವೊಂದನ್ನು ಪರಿಚಯಿಸಲಿ.

 

From Udayavani Newspaper (12.6.2012):

vasant-ole-uvani

ಚೆನ್ನಾಗಿ ಇಂಗ್ಲೀಷ್ ಕಲಿಯಲು, ಚೆನ್ನಾಗಿ ಕನ್ನಡ ಗೊತ್ತಿರಬೇಕು

ಇಂಡಿಯಾದಲ್ಲಿ ಹಲವಾರು ನುಡಿ ಸಮುದಾಯಗಳಿವೆ. ನಮ್ಮ ರಾಜ್ಯದಲ್ಲಿ ಕನ್ನಡ ನುಡಿಯು ಅತಿ ಹೆಚ್ಚಿನ ಹರವು ಪಡೆದಿದ್ದರೂ ಶಾಲೆಗಳಲ್ಲಿ ಇಂಗ್ಲೀಷ್ ನುಡಿಯನ್ನೂ ಕಲಿಸಲಾಗಿ ಬಹುತೇಕ ಊರುಗಳಲ್ಲಿ ಶಾಲೆಯ ಪರಿಸರವು ಒಂದಕ್ಕಿಂತ ಹೆಚ್ಚು ನುಡಿಗಳಿಂದ ಕೂಡಿದೆ. ಹೀಗೆ ಹಲವಾರು ನುಡಿಗಳಿರುವ ಪರಿಸರದಲ್ಲಿ ಮಕ್ಕಳ ಓದುವಿಕೆಯ (Reading Skills) ಕುರಿತು ಅಮೇರಿಕನ್ ಇನ್ಸ್ಟಿಟ್ಯೂಟ್ಸ್ ಫಾರ್ ರಿಸರ್ಚ್ (AIR) ಸಂಸ್ಥೆಯು ತಾನು 2013 ನೇ ಸಾಲಿನಲ್ಲಿ ನಡೆಸಿದ ಸಮೀಕ್ಷೆಯೊಂದರ ವರದಿಯನ್ನು ಇತ್ತೀಚೆಗೆ ಪ್ರಕಟಿಸಿತು. ಇದನ್ನು FRAME – India (Facilitating Reading Acquisition in Multilingual Environments in India) ವರದಿಯೆಂದು ಹೆಸರಿಸಿದೆ.

Indian school children

ಶಾಲಾ ಹಂತದಲ್ಲಿ ಮಕ್ಕಳಿಗೆ ಇಂಗ್ಲೀಷ್ ಕಲಿಸುವ ಬಗೆಯ ಸುತ್ತ ನಮ್ಮ ಸಮಾಜದಲ್ಲಿರುವ ಹಲವು ಗೊಂದಲಗಳಿವೆ. ಉದಾಹರಣೆಗೆ, ಮಕ್ಕಳಿಗೆ ಚನ್ನಾಗಿ ಇಂಗ್ಲೀಷ್ ನುಡಿ ಕಲಿಸಬೇಕಾದರೆ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಸಬೇಕೇ? ಇಂಗ್ಲೀಷಲ್ಲಿ ಒಂದೆರಡು ವಿಷಯ, ಕನ್ನಡದಲ್ಲಿ ಒಂದೆರಡು ವಿಷಯ, ಹೀಗೆ ಮಿಶ್ರಮಾಧ್ಯಮ ಇಟ್ಟುಕೊಳ್ಳಬೇಕೋ? ಮಕ್ಕಳಿಗೆ ಇಂಗ್ಲೀಷ್ ನುಡಿಯನ್ನು ಕಲಿಸಲು ಸರಿಯಾದ ವಯಸ್ಸು ಯಾವುದು? ಎಂಬ ಪ್ರಶ್ನೆಗಳು ಇವತ್ತು ನಮ್ಮ ಸಮಾಜದಲ್ಲಿ ಓಡಾಡುತ್ತಿವೆ. ಇಂತಹ ಗೊಂದಲಗಳಿಗೆ ವೈಜ್ಞಾನಿಕವಾಗಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಈ ಸಮೀಕ್ಷೆಯಲ್ಲಿ ಮಾಡಲಾಗಿದೆ. ಈ ಸಮೀಕ್ಷೆಯ ಅಡಿಯಲ್ಲಿ ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಸುಮಾರು 550 ಮಕ್ಕಳನ್ನು ಪರೀಕ್ಷಗೆ ಒಳಪಡಿಸಲಾಗಿದೆ. ಈ ಸಮೀಕ್ಷೆಯಲ್ಲಿ ಕಂಡುಕೊಂಡಿರುವುದೇನೆಂದರೆ:

– ಮಕ್ಕಳಿಗೆ ಎರಡನೇ ನುಡಿ (L2) ಕಲಿಯಲು ಅವರ ತಾಯ್ನುಡಿಯ (L1) ಗಟ್ಟಿಯಾದ ಅಡಿಪಾಯದಿಂದ ನೆರವಾಗುತ್ತದೆ

– ಯಾವ ಮಕ್ಕಳಿಗೆ ತಮ್ಮ ವಯಸ್ಸಿಗೆ ತಕ್ಕಂತೆ ತಮ್ಮ ತಾಯ್ನುಡಿಯಲ್ಲಿ (L1) ನೂರಕ್ಕೆ 60 ರಷ್ಟು ಪದಗಳನ್ನು ಓದಿ ತಿಳಿಯಲು ಆಗುತ್ತದೆಯೋ, ಆ ಮಕ್ಕಳು ಎರಡನೇ ನುಡಿಯನ್ನು (L2) ಕಲಿಯುವಲ್ಲಿ ಮುಂದಿರುತ್ತಾರೆ. ಕರ್ನಾಟಕದ ಶಾಲೆಗಳಲ್ಲಿ ಎರಡನೇ ನುಡಿಯ (L2) ಸ್ಥಾನವನ್ನು ಇಂಗ್ಲೀಷ್ ನುಡಿಯು ಪಡೆದುಕೊಂಡಿದೆ.

ಮೇಲಿನ ಅಂಕಿ ಅಂಶಗಳನ್ನು ಮಂಡಿಸಲು ಈ ಸಮೀಕ್ಷೆಯಲ್ಲಿ ಹಲವು ಬಗೆಯಲ್ಲಿ ಮಕ್ಕಳ ಓದುವಿಕೆಯನ್ನು ಒರೆಗೆ ಹಚ್ಚಲಾಗಿದೆ. ಸಮೀಕ್ಷೆಗೆ ಒಳಪಡಿಸಲಾದ ಮಕ್ಕಳಲ್ಲಿ ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ತಮ್ಮ ತರಗತಿಗೆ ತಕ್ಕಂತೆ ತಮ್ಮ ಮೊದಲ ನುಡಿಯಲ್ಲಿ ಮತ್ತು ಇಂಗ್ಲೀಷಿನಲ್ಲಿ ಪದಗಳನ್ನು, ವಾಕ್ಯಗಳನ್ನು ಓದಲು ಹೇಳಲಾಗಿದೆ. ಇದರಲ್ಲಿ ಎಷ್ಟು ಮಕ್ಕಳು ತಮ್ಮ ನುಡಿಯಲ್ಲಿ 60% ಪದಗಳನ್ನು ಸರಿಯಾಗಿ ಓದಿದರು ಅನ್ನುವುದರ ಅಂಕಿ ಅಂಶಗಳು ಹೀಗಿವೆ:

– ಒಂದನೇ ತರಗತಿಯ ಮಕ್ಕಳಲ್ಲಿ ಯಾರೂ ಓದಲಿಲ್ಲ

– ಎರಡನೇ ತರಗತಿಯ ಮಕ್ಕಳಲ್ಲಿ 40% ಮಕ್ಕಳು ಓದಿದರು

– ಮೂರನೇ ತರಗತಿಯ ಮಕ್ಕಳಲ್ಲಿ ಸುಮಾರು 30% ಮಕ್ಕಳು ಓದಿದರು

– ನಾಲ್ಕನೇ ತರಗತಿಯ ಮುಗಿಸುತ್ತಿರುವ ಮಕ್ಕಳಲ್ಲಿ 80% ಮಕ್ಕಳು ಸರಿಯಾಗಿ ಓದಿದರು

ಮೇಲಿನ ಅಂಕಿ ಅಂಶಗಳ ಪ್ರಕಾರ ನಾಲ್ಕನೇ ತರಗತಿಯನ್ನು ಮುಗಿಸುವ ಹೊತ್ತಿಗೆ 80% ಮಕ್ಕಳು ತಮ್ಮ ತಾಯ್ನುಡಿಯಲ್ಲಿ ನೂರಕ್ಕೆ 60 ಪದಗಳನ್ನು ಸರಿಯಾಗಿ ಓದಿ ತಿಳಿಯಬಲ್ಲವರಾಗಿದ್ದು, ಕಡಿಮೆಯೆಂದರೂ ಈ ಮಟ್ಟದ ಮೊದಲ ನುಡಿಯ ತಿಳುವಳಿಕೆ ಇದ್ದಾಗಲೇ ಎರಡನೇ ನುಡಿಯನ್ನು (ಇಂಗ್ಲೀಷ್) ಕಲಿಯುವಲ್ಲೂ ಮಕ್ಕಳು ಮುಂದಿರುವುದು ಕಂಡುಬಂದಿದೆ. ಅಲ್ಲದೇ ಈ ಮೊದಲೇ ಹಲವಾರು ಸಂಶೋಧನೆಗಳು ಸಾರಿರುವಂತೆ “ಯಾವುದೇ ನುಡಿಯನ್ನು ಓದಬೇಕಾದರೆ ಆ ನುಡಿಯನ್ನು ಮಾತಾಡಲು ಗೊತ್ತಿರಬೇಕು” ಎಂಬ ಹೇಳಿಕೆಯನ್ನು ಈ ವರದಿಯಲ್ಲಿಯೂ ಉಲ್ಲೇಖಿಸಲಾಗಿದೆ. ಮಕ್ಕಳು ಶಾಲೆಗೆ ಸೇರುವ ಹೊತ್ತಿಗೆ ಚೆನ್ನಾಗಿ ಗೊತ್ತಿರುವ ನುಡಿ ತಮ್ಮ ತಾಯ್ನುಡಿಯೇ ಆಗಿರುತ್ತದೆ. ಹೀಗಿರುವಾಗ ತಾಯ್ನುಡಿಯಲ್ಲಿ ಚೆನ್ನಾಗಿ ಓದಿ ತಿಳಿಯುವ ಅಡಿಪಾಯ ಹಾಕಿಕೊಟ್ಟರೆ ಮಕ್ಕಳಿಗೆ ಮುಂದಿನ ತರಗತಿಗಳಲ್ಲಿ ಇಂಗ್ಲೀಷ್ ಕಲಿಯಲು ನೆರವಾಗುತ್ತದೆ. ಮಕ್ಕಳಿಗೆ ತಮ್ಮ ತಾಯ್ನುಡಿಯಲ್ಲಿ ಒಳ್ಳೆಯ ಹಿಡಿತ ಬರಬೇಕಾದರೆ, ಅವರಿಗೆ ಸತತವಾಗಿ ವಿಷಯಗಳನ್ನು ತಾಯ್ನುಡಿಯಲ್ಲೇ ಕಲಿಸಬೇಕೆಂದೂ ಈ ವರದಿಯಲ್ಲಿ ಹೇಳಲಾಗದೆ. ಈ ವೈಜ್ಞಾನಿಕವಾಗಿ ಕಲಿಸುವ ಬಗೆಯನ್ನು ಮನಸಿನಲ್ಲಿಟ್ಟುಕೊಂಡು ಇಂದಿನ ಖಾಸಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಆಗುವ ಕಲಿಕೆಯನ್ನು ಗಮನಿಸಿದಾಗ ನಮ್ಮ ಸಮಾಜದಲ್ಲಿ ಇಂಗ್ಲೀಷ್ ಕಲಿಕೆಯ ಸುತ್ತ ಇರುವ ತಪ್ಪು ನಂಬಿಕೆಗಳು ಕಾಣುತ್ತವೆ. ನಮ್ಮಲ್ಲಿ ಹಲವಾರು ತಾಯ್ತಂದೆಯರು ತಮ್ಮ ಮಕ್ಕಳು ಚನ್ನಾಗಿ ಇಂಗ್ಲೀಷ್ ಕಲಿಯಲಿ ಎಂಬ ಬಯಕೆಯಿಂದ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗೆ ಸೇರಿಸುತ್ತಾರೆ. ಆದರೆ ಇಂತಹ ನಡೆಯಿಂದ ಮಕ್ಕಳಿಗೆ ಒಳ್ಳೆಯ ಇಂಗ್ಲೀಷ್ ಕಲಿಕೆ ಆಗುವುದಿಲ್ಲ ಎಂಬ ದಿಟವನ್ನು ಈ ಸಂಶೋಧನೆಯೂ ಸೇರಿದಂತೆ ಹಲವಾರು ಸಂಶೋಧನೆಗಳು ತೋರುತ್ತಲೇ ಬಂದಿವೆ.

ಮಕ್ಕಳಿಗೆ ಎಳವೆಯಲ್ಲಿ ವಿಷಯಗಳ ತಿರುಳು ಚೆನ್ನಾಗಿ ತಿಳಿಯಬೇಕು, ಅಲ್ಲದೇ ಮುಂದಿನ ದಿನಗಳಲ್ಲಿ ಚೆನ್ನಾಗಿ ಇಂಗ್ಲೀಷ್ ನುಡಿಯನ್ನೂ ಕಲಿಯಬೇಕೆಂದರೆ ಅವರಿಗೆ ತಾಯ್ನುಡಿಯ ಗಟ್ಟಿಯಾದ ಅಡಿಪಾಯ ಹಾಕಿಕೊಡಬೇಕಾದುದು ತಾಯ್ತಂದೆಯರ ಹೊಣೆಯಾಗಿರುತ್ತದೆ. ಕನ್ನಡದ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುವುದರಿಂದ ಅವರ ಕಲಿಕೆ ಹಸನಾಗುತ್ತದೆ. ಕನ್ನಡದ ಮಕ್ಕಳು ಕನ್ನಡವನ್ನು ಓದಿ ಬರೆಯುವ ಕೆಲಸದಲ್ಲಿ ಪಳಗದೇ ಇದ್ದರೆ, ಅವರಿಗೆ ಇಂಗ್ಲೀಷಿನಲ್ಲಿ ಓದಿ ಬರೆಯುವ ಕೆಲಸ ಒಲಿಯುವುದಿಲ್ಲ.

ಚಿತ್ರ ಸೆಲೆ : http://static.guim.co.uk/

ತಾಯ್ನುಡಿಯ ಮಾಧ್ಯಮದಲ್ಲಿ ಹಲನುಡಿಗಳ ಕಲಿಕಾ ವ್ಯವಸ್ಥೆಯ ಹೆಚ್ಚುಗಾರಿಕೆಯೇನು?

ಕ್ಯುಂಗ ಕ್ರಿಸ್ಟಿ ಬ್ಯಾಂಗ್ ಎನ್ನುವವರು ಬ್ಯಾಂಕಾಕಿನ ಯುನೆಸ್ಕೋ ಕಚೇರಿಯಲ್ಲಿ ಯೋಜನಾ ಸಂಯೋಜಕರಾಗಿದ್ದಾರೆ. ಫೆಬ್ರವರಿ 21 ವಿಶ್ವ ತಾಯ್ನುಡಿ ದಿನದಂದು “ದಿ ನ್ಯಾಷನಲ್ ಒಪೀನಿಯನ್” ಅನ್ನುವ ಮಿಂಬಲೆ ತಾಣದಲ್ಲಿ ಮೂಡಿಬಂದ ಅವರ ಅಂಕಣವನ್ನು ಇಲ್ಲಿ ಕನ್ನಡಕ್ಕೆ ತರಲಾಗಿದೆ. ಮೂಲ ಅಂಕಣವನ್ನು ಇಲ್ಲಿ ಓದಬಹುದು: http://www.thenational.ae/opinion/comment/learning-in-your-mother-tongue-first-is-key-to-success-at-school

 

The-Human-Brain-Must-Forget-the-Mother-Tongue-When-Learning-a-New-Language

ನಾನು ಕಳೆದ ಐದು ವರುಶಗಳಿಂದ ಏಶ್ಯಾದ ಹಲನುಡಿಗಳ ಕಲಿಕಾ ವ್ಯವಸ್ಥೆಯ ಕುರಿತು ಕೆಲಸ ಮಾಡುತ್ತಿರುವ ಗುಂಪಿನ ಸಂಯೋಜಕನಾಗಿದ್ದೇನೆ. ಈ ಗುಂಪಿನ ಉದ್ದೇಶ ಏಶ್ಯಾದ ಅಲ್ಪಸಂಖ್ಯಾತ ನುಡಿ ಸಮುದಾಯಗಳಿಗೆ ಉತ್ತಮ ಗುಣಮಟ್ಟದ ಕಲಿಕೆ ದೊರಕಿಸುವಲ್ಲಿ ಇರುವ ತೊಡಕುಗಳನ್ನು ನಿವಾರಿಸುವುದೇ ಆಗಿದೆ. “ತಾಯ್ನುಡಿಯ ಮಾಧ್ಯಮದಲ್ಲಿ ಹಲನುಡಿಗಳ ಕಲಿಕಾ ವ್ಯವಸ್ಥೆಯ ಹೆಚ್ಚುಗಾರಿಕೆಯೇನು?” –  ಈ ಪ್ರಶ್ನೆಯನ್ನು ಕಳೆದ ಐದು ವರುಶಗಳಲ್ಲಿ ಹಲವರು ನನ್ನ ಬಳಿ ಕೇಳಿದ್ದಾರೆ. ಇದಕ್ಕೆ ಉತ್ತರ ನನ್ನದೇ ಕಥೆಯೊಂದಿಗೆ ಹೇಳುತ್ತೇನೆ.

ನನ್ನ ಕುಟುಂಬ ಆಗತಾನೆ ದಕ್ಷಿಣ ಕೊರಿಯಾದಿಂದ ಕೆನಡಾಕ್ಕೆ ಗುಳೆ ಹೋಗಿದ್ದ ದಿನಗಳು; ಆಗ ಅಲ್ಲಿನ ನುಡಿ ಗೊತ್ತಿಲ್ಲದ ನನಗೆ ಅವು ತುಂಬಾ ಕಸಿವಿಸಿ ತರುವ ದಿನಗಳಾಗಿದ್ದವು. ಎಲ್ಲರಿಂದ ದೂರವಿದ್ದೇನೆ, ಒಂಟಿಯಾಗಿದ್ದೇನೆ ಎಂದು ಅನ್ನಿಸತೊಡಗಿತ್ತು ನನಗೆ. ನನ್ನ ಜೊತೆಯ ಹುಡುಗರು, ಶಿಕ್ಷಕರು ಎಲ್ಲರೂ ಒಬ್ಬರನೊಬ್ಬರು ಮಾತನಾಡಿಸುತ್ತಿದ್ದರೆ, ನಾನು ಮಾತ್ರ ಸುಮ್ಮನಿರುತ್ತಿದ್ದೆ. ನನ್ನ ಊರಿನ ಶಾಲೆಯಲ್ಲಿ ಇದ್ದಾಗ ಪಟಪಟನೆ ಮಾತನಾಡುತ್ತಾ ಎಲ್ಲರೊಂದಿಗೆ ಬೆರೆಯುತ್ತಿದ್ದ ನಾನು ಮೆಲ್ಲನೆ ಕಡಿಮೆ ಮಾತನಾಡುವ ಮತ್ತು ನಾಚಿಕೆಯಿಂದ ನಡೆದುಕೊಳ್ಳುವುದನ್ನು ಮೈಗೂಡಿಸಿಕೊಳ್ಳುವಂತೆ ಆಯಿತು. ಶಾಲೆಯಲ್ಲಿ ನನಗೆ ಹುರುಪಿನ ಪರಿಸರವಿಲ್ಲದಂತೆ ಆಯಿತು.

ಕೆಲ ತಿಂಗಳು ಕಳೆಯುತ್ತಿದ್ದಂತೆ, ನಾನು ಇಂಗ್ಲಿಷ್ ಕಲಿಯಲು ಮೊದಲಾದೆ. ನನ್ನ ತಾಯ್ನುಡಿಯಾದ ಕೊರಿಯನ್ ನುಡಿಯಲ್ಲಿ ನನಗೆ – ಓದುವುದು, ವಿಷಯಗಳ ತಿರುಳು ಮತ್ತು ಗಣಿತದ ಚಳಕಗಳು – ಚನ್ನಾಗಿ ಗೊತ್ತಿದ್ದರಿಂದ ಅದೇ ವಿಷಯಗಳನ್ನು ಇಂಗ್ಲಿಷಿನಲ್ಲಿ ಕಲಿಯುವ ಮೂಲಕ ಇಂಗ್ಲಿಷ್ ಚನ್ನಾಗಿ ಕಲಿಯಲು ಸಾಧ್ಯವಾಯಿತು. ನನ್ನ ಶಿಕ್ಷಕರು, ನನ್ನ ಜೊತೆಯೋದುಗರು ಮತ್ತು ತಾಯ್ತಂದೆಯರ ನೆರವಿನಿಂದ ಕೆಲ ದಿನಗಳಲ್ಲಿ ನಾನೇ ಇಂಗ್ಲಿಷ್ ಮಾತನಾಡಲು ಕಲಿತೆ. ಇಂಗ್ಲಿಷ್ ಕಲಿಯುತ್ತಿದ್ದಂತೆಯೇ ನಾನು ನನ್ನ ಶಾಲೆಯಲ್ಲಿ ಮತ್ತು ಕೆನಡಾದ ಸಮಾಜದಲ್ಲಿ ಒಂದಾದಂತೆ ಅನಿಸತೊಡಗಿತು.

ವಿಶ್ವ ತಾಯ್ನುಡಿ ದಿನವನ್ನು ಈ ವರುಶ “ಕಲಿಕೆಯಲ್ಲಿ ನುಡಿಯ ಮೂಲಕ ಒಳಗೂಡಿಕೆ – ಇದರಲ್ಲಿ ನುಡಿಯ ಮಹತ್ವ” ಎನ್ನುವುದರ ಸುತ್ತ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಈ ವರುಶದ ವಿಷಯ ನನ್ನ ಅನುಭವಕ್ಕೆ ಕನ್ನಡಿ ಹಿಡಿದಂತಿದೆ. ಅಲ್ಲದೆ ತಮ್ಮ ತಾಯ್ನುಡಿಯಲ್ಲಿ ಕಲಿಕೆ ಸಿಗದೇ ಬಳಲುತ್ತಿರುವ ಜಗತ್ತಿನ 230 ಕೋಟಿ ಮಂದಿಯ ಪಾಡಿಗೂ ಇದು ಸರಿಹೊಂದುತ್ತದೆ. ಇವರಲ್ಲಿ ಹಲವರಿಗೆ ನನಗೆ ಆದ ಪಾಡಿನ ಜೊತೆಗೆ ಬಡತನದ ಬೇನೆಯೂ ಸೇರಿಕೊಂಡಿರುತ್ತದೆ.

ಕಲಿಕೆಯಲ್ಲಿ ಒಳಗೂಡಿಕೆ ಹೆಚ್ಚಿಸಲು ನುಡಿಯೇ ಸರಿಯಾದ ಮದ್ದು. ಮಕ್ಕಳಿಗೆ ಶಾಲೆಯಲ್ಲಿ ಬಳಸುವ ನುಡಿ ತಿಳಿಯದಿದ್ದರೆ, ಅವರು ವಿಷಯಗಳನ್ನು ಕಲಿಯಲು ಆಗುವುದಿಲ್ಲ. ಅಲ್ಪಸಂಖ್ಯಾತ ನುಡಿ ಸಮುದಾಯಗಳಿಂದ ಬರುವ ಮಕ್ಕಳಂತೂ ಶಾಲೆಯಲ್ಲಿ ಕಲಿಸುವುದು ಅರ್ಥವಾಗದೆ ದಿನಕಳೆದಂತೆ ಕಲಿಕೆಯಿಂದಲೇ ಹೊರಗುಳಿಯುತ್ತಾರೆ – ಜೊತೆಗೆ ಸಮಾಜದಲ್ಲಿಯೂ ಹೊರಗುಳಿಯುತ್ತಾರೆ.

ನುಡಿಯ ಬಿರುಕಿನ ಜೊತೆಜೊತೆಗೆ ಗಂಡು-ಹೆಣ್ಣೆಂಬ ತಾರತಮ್ಯ, ಜಾತಿ ಪದ್ಧತಿ, ಅಂಗವೈಕಲ್ಯ ಮತ್ತು ಸೌಕರ್ಯಗಳಿಂದ ದೂರವಿರುವ ಕಾಡು-ಮೇಡು-ಬೆಟ್ಟಗಾಡಿನ ಮಂದಿಯ ಸಮಸ್ಯೆಗಳೂ ಸೇರಿದರೆ ಇಂತಹ ಹಿನ್ನೆಲೆಯ ಮಕ್ಕಳು ಶಾಲೆಯಲ್ಲಿ ಹೆಚ್ಚು ದಿನ ಉಳಿಯಲು ಆಗುವುದೇ ಇಲ್ಲ. ಯುನೆಸ್ಕೋ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಮೇಲೆ ತಿಳಿಸಿದ ಹಿನ್ನೆಲೆಯ ಮಕ್ಕಳು ಬೊಲಿವಿಯ, ಈಕ್ವೆಡಾರ್, ಇಂಡಿಯಾ ಮತ್ತು ಲಾವೋಸ್ ನಂತಹ ದೇಶಗಳಲ್ಲಿರುವ ಶಾಲೆಗಳಲ್ಲಿ ಓದು ಮುಂದುವರೆಸುವ ಸಾಧ್ಯತೆ 2-3ಪಟ್ಟು ಕಡಿಮೆ.

ನನ್ನ ಅನುಭವದಿಂದ ಹೇಳಬೇಕಾದರೆ, ಬೇರೊಂದು ನುಡಿಯನ್ನು ಕಲಿಯಲು ಅಥವಾ ಬೇರೊಂದು ಕಲಿಕಾ ಏರ್ಪಾಡಿಗೆ ಹೊಂದಿಕೊಳ್ಳಲು ನನ್ನ ತಾಯ್ನುಡಿಯಲ್ಲಿ ನಾನು ವಿಷಯಗಳನ್ನು ಚನ್ನಾಗಿ ಕಲಿತದ್ದು ನೆರವಾಯಿತು. ನನ್ನ ಶಾಲಾ ಕಲಿಕೆಯ ಮೊದಲ ಆರು ವರುಶ ನಾನು ವಿಷಯಗಳ ತಿರುಳನ್ನು ಮತ್ತು ನನ್ನ ಪದಸಂಪತ್ತನ್ನು ಹೆಚ್ಚಿಸಿಕೊಂಡಿದ್ದು ಮುಂದೆ ಬೇರೊಂದು ನುಡಿಗೆ ಆ ಎಲ್ಲಾ ವಿಷಯಗಳನ್ನೂ ತಂದುಕೊಳ್ಳಲು ನೆರವಾಯಿತು. ತಾಯ್ನುಡಿಯಲ್ಲಿ ಕಲಿಕೆಯ ಗಟ್ಟಿಯಾದ ಅಡಿಪಾಯವಿಲ್ಲದೆ ನಾನು ಬೇರೊಂದು ನುಡಿಯನ್ನು ಚನ್ನಾಗಿ ಕಲಿಯಲೂ ಆಗುತ್ತಿರಲಿಲ್ಲ, ನನ್ನ ಓದನ್ನು ಮುಂದುವರೆಸಲೂ ಆಗುತ್ತಿರಲಿಲ್ಲ.

ಸಂಶೋಧನೆಗಳಿಂದ ನಾವು ತಿಳಿಯುವುದೇನೆಂದರೆ ತಾಯ್ನುಡಿಯಲ್ಲಿ ಮಕ್ಕಳ ಮೊದಲ ಹಂತದ ಕಲಿಕೆ ಆದಾಗ ಮಾತ್ರವೇ ಮಕ್ಕಳು ಹೆಚ್ಚು ವರುಶ ಕಲಿಕೆಯಲ್ಲಿ ತೊಡಗಲು ಆಗುತ್ತದೆ. ಇಂತಹ ಏರ್ಪಾಡಿನಿಂದ, ಹಿಂದುಳಿದ ವರ್ಗಗಳಿಂದ ಬರುವ ಮಕ್ಕಳಿಗೆ ಕಲಿಕೆ ಹೆಚ್ಚು ಹತ್ತಿರವಾಗುತ್ತದೆ. ಅಲ್ಲದೆ, ತಾಯ್ನುಡಿಯ ಮಾಧ್ಯಮದಲ್ಲಿ ಹಲನುಡಿಗಳ ಕಲಿಕಾ ವ್ಯವಸ್ಥೆಯಲ್ಲಿ ಕಲಿತ ಮಕ್ಕಳು ಬೇರೊಂದು ನುಡಿಯನ್ನು ಕಲಿಯುವಲ್ಲಿಯೂ ಮುಂದಿರುತ್ತಾರೆ.

ನಾನು ಕೊರಿಯಾದಲ್ಲಿ ಓದುತ್ತಿದ್ದಾಗ ನನ್ನ ತಾಯ್ತಂದೆಯರು ನನ್ನ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಷ್ಟು, ಕೆನಡಾದಲ್ಲಿ ಪಾಲ್ಗೊಳ್ಳಲು ಆಗುತ್ತಿರಲಿಲ್ಲ. ಮಕ್ಕಳ ಉತ್ತಮ ಕಲಿಕೆಗೆ, ಮಕ್ಕಳು ಶಾಲೆಯಲ್ಲಿ ಹೆಚ್ಚು ಕಾಲ ಉಳಿಯಲು ಮತ್ತು ಸಾಮಾಜಿಕ ಏಳಿಗೆ ಹೊಂದಲು ತಾಯ್ತಂದೆಯರ ಪಾಲ್ಗೊಳ್ಳುವಿಕೆಯ ಕೊಡುಗೆ ಹಿರಿದಾದುದು. ಅಲ್ಪಸಂಖ್ಯಾತ ನುಡಿ ಸಮುದಾಯಗಳ ತಾಯ್ತಂದೆಯರು ಹಲವು ಬಾರಿ ಈ ನಿಟ್ಟಿನಲ್ಲಿ ಹಿಂದುಳಿಯುತ್ತಾರೆ.

ತಾಯ್ನುಡಿಯ ಮಾಧ್ಯಮದಲ್ಲಿ ಹಲನುಡಿಗಳ ಕಲಿಕಾ ವ್ಯವಸ್ಥೆಯಿಂದ ಮನೆಯ, ಶಾಲೆಯ ಮತ್ತು ಸುತ್ತಲ ಪರಿಸರದಲ್ಲಿ ಇರುವ ನಡೆ-ನುಡಿಗೆ ಹೊಂದಿಕೊಳ್ಳಲು ಮಗುವಿಗೆ ನೆರವಾಗುತ್ತದೆ. ಕಲಿಕೆ ಒಂದೇ ಅಲ್ಲದೆ ಹಲಬಗೆಯ ಜನರನ್ನು ಸಹನೆಯಿಂದ ಒಪ್ಪಿಕೊಳ್ಳುವ ಗುಣವನ್ನು ಬೆಳೆಸುತ್ತದೆ. ಶಾಂತಿ, ಸಮಾನತೆ ಮತ್ತು ಎಲ್ಲರ ಒಳಗೂಡಿಕೆಯ ಸಮಾಜವನ್ನು ಕಟ್ಟುವಲ್ಲಿ ಇದರಿಂದ ನೆರವಾಗುತ್ತದೆ.

ಹಲನುಡಿಗಳ ಕಲಿಕೆಗೆ ತಗುಲುವ ವೆಚ್ಚ ತುಸು ಹೆಚ್ಚಾದರೂ, ಇದರಿಂದ ಮುಂದಿನ ದಿನಗಳಲ್ಲಿ ಆಗುವ ಒಳಿತನ್ನು ನೋಡಿದಾಗ ಈ ವೆಚ್ಚ ಸಣ್ಣದೆನ್ನಿಸುತ್ತದೆ. ಹಲನುಡಿಗಳ ನಾಡುಗಳಲ್ಲಿ ಒಂದೇ ನುಡಿಯ ಕಲಿಕೆ ಹೆಚ್ಚು ದಿನ ನಡೆಸಲು ಆಗುವುದಿಲ್ಲ. ಹಾಗಾಗಿ ಹಲನುಡಿಗಳ ಕಲಿಕೆಯಿಂದ ಉಳಿತಾಯ ಹೆಚ್ಚು, ಮತ್ತು ಕೋಟ್ಯಾಂತರ ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲೂ ಸಾಧ್ಯವಾಗುತ್ತದೆ.

 

ಚಿತ್ರ ಸೆಲೆ : news.softpedia-static.com

ಮಕ್ಕಳ ಉತ್ತಮ ಕಲಿಕೆಗಾಗಿ ಮೂರು ಸೂತ್ರಗಳು

ನೀವು ನಿಮ್ಮ ಮಕ್ಕಳಿಗೆ ಈಜು ಕಲಿಸುವ ಮೊದಲೇ ಆಳವಾದ ನೀರಿನಲ್ಲಿ ಇಳಿಸುತ್ತೀರಾ? ಇಲ್ಲಾ ತಾನೇ. ಅಂದ ಮೇಲೆ ಇಂಗ್ಲಿಷ್ ಬಾರದ ಮಗುವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಏಕೆ ಓದಿಸುತ್ತೀರಿ? ಇಂಗ್ಲಿಷ್ ಸಾಗರ ಈಜುವುದನ್ನು ಮಕ್ಕಳಿಗೆ ಕಲಿಸುವುದು ಹೇಗೆ ಅನ್ನುವ ಕುತೂಹಲ ನಿಮಗೂ ಇದೆಯೇ? ನಿಮ್ಮ ಮಕ್ಕಳು ತಕ್ಕಮಟ್ಟಿಗೆ ಇಂಗ್ಲಿಷ್ ಮಾತಾಡಿದರೆ ಸಾಕಾ? ಅವರು ಆಳವಾಗಿ ವಿಜ್ಞಾನ ಕಲಿಯಬೇಡವೇ? ಈ ಎರಡನ್ನೂ ಸಾಧಿಸೋದು ಹೇಗೆ ಅನ್ನುವ ಕುತೂಹಲ ನಿಮಗಿದೆಯೇ? ಮಕ್ಕಳ ಕಲಿಕೆಯಲ್ಲಿ ತಾಯ್ನುಡಿಯ ಪಾತ್ರವೇನು? ಮಕ್ಕಳ ಉತ್ತಮ ಕಲಿಕೆಗೆ ಮೂರು ಸೂತ್ರಗಳು ಯಾವುವು?
ಡಿಸೆಂಬರಿನಲ್ಲಿ ನಡೆದ ತಿಂಗಳ ಅಂಗಳ ಮಾತುಕತೆಯಲ್ಲಿ ವಲ್ಲೀಶ್ ಕುಮಾರ್ ಅವರೊಡನೆ ನಡೆದ “ಮಕ್ಕಳ ಉತ್ತಮ ಕಲಿಕೆಗಾಗಿ ಮೂರು ಸೂತ್ರಗಳು” – ಮಾತುಕತೆಯ ವೀಡಿಯೊ ತುಣುಕು ಇಲ್ಲಿದೆ:
 

“ಬೆಳಗಲಿ ನಾಡ ನಾಳೆಗಳು” – ಕಲಿಕಾ ವ್ಯವಸ್ಥೆಗೊಂದು ಕೈಮರ

‘ಬನವಾಸಿ ಬಳಗ ಪ್ರಕಾಶನ’ದಿಂದ ಹೊರತರಲಾಗಿರುವ  “ಬೆಳಗಲಿ ನಾಡ ನಾಳೆಗಳು” ಎಂಬ ಹೊತ್ತಗೆಯ ಕಿರು ಪರಿಚಯ ಇಲ್ಲಿದೆ.

belagali-mukhaputaಯಾವುದೇ ನಾಡಿನ ಏಳಿಗೆಯಲ್ಲಿ ಅಲ್ಲಿನ ಶಿಕ್ಷಣ ವ್ಯವಸ್ಥೆಯ ಪಾತ್ರ ಮಹತ್ವದ್ದಾಗಿರುತ್ತದೆ. ‘ತಾಯ್ನುಡಿಯಲ್ಲಿ ಕಲಿಕೆಯೇ ಪರಿಣಾಮಕಾರಿಯಾದುದು’ ಎಂಬುದನ್ನು ಜಗತ್ತಿನ ಎಲ್ಲಾ ಕಲಿಕೆಯರಿಗರೂ, ನುಡಿಯರಿಗರೂ ಸಾರಿ ಹೇಳುತ್ತಿದ್ದು, ತಾಯ್ನುಡಿಯಲ್ಲಿಯೇ ಎಲ್ಲವನ್ನೂ ಕಲಿಯುವ ಹಲದೇಶಗಳು ಏಳಿಗೆಯ ಮೆಟ್ಟಿಲಲ್ಲಿ ತುಂಬಾ ಮೇಲೇರಿ ನಿಂತಿರುವುದು ನಮ್ಮ ಕಣ್ಣ ಮುಂದಿದೆ. ಆದರೆ ಕನ್ನಡನಾಡಿನಲ್ಲಿ ಮಾತ್ರಾ ಕನ್ನಡದಲ್ಲೇ ಎಲ್ಲಾ ಬಗೆಯ ಕಲಿಕೆ ಸಿಗಬಹುದಾದ ವ್ಯವಸ್ತೆ ಕಟ್ಟಲಾಗಿಲ್ಲ ಎನ್ನಬಹುದು. ಮೊದಲ ಹಂತದ ಕಲಿಕೆಯಿಂದ ಮೇಲ್ಮಟ್ಟದ ಕಲಿಕೆಯವರೆಗೂ ಕನ್ನಡದಲ್ಲಿಯೇ ಕಲಿಯಬಹುದಾದ ಏರ್ಪಾಡು ಕನ್ನಡಿಗರಿಗೆ ಸಾಕಷ್ಟು ಒಳಿತು ಮಾಡಬಲ್ಲದಾಗಿದೆ. ಆ ಮೂಲಕವೇ ನಮ್ಮ ನಾಡಿನ ನಾಳೆಗಳು ಬೆಳಗಬಹುದು.

ನಮ ನಾಡಿನಲ್ಲೂ ಜ್ಞಾನವು ಜನರಾಡುವ ನುಡಿಯಲ್ಲಿ ದೊರಕುವಂತಾಗಬೇಕು ಎಂಬ ಆಶಯದಿಂದ ಈ ಹೊತ್ತಗೆಯನ್ನು ಸಂಪಾದಿಸಲಾಗಿದೆ. ಅಂತಹ ವ್ಯವಸ್ಥೆಯನ್ನು ಕಟ್ಟಲು ನಮ್ಮ ಮುಂದಿರುವ ತೊಡಕುಗಳೇನು, ಅವುಗಳನ್ನು ನಿವಾರಿಸಿಕೊಳ್ಳುವ ದಾರಿಗಳಾವುವು, ಕಟ್ಟುವ ಕೆಲಸದಲ್ಲಿ ಯಾರೆಲ್ಲಾ ಪಾಲ್ಗೊಳ್ಳಬಹುದಾಗಿದೆ, ಬೇರೆ ಬೇರೆ ಆಯಾಮಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಬೇಕಿದೆ ಇತ್ಯಾದಿಗಳನ್ನು ಚರ್ಚಿಸಲಾಗಿದೆ.
ಈ ಹೊತ್ತಗೆ ಈ ಕೆಳಗಿನ ಮಳಿಗೆಗಳಲ್ಲಿ ದೊರೆಯುತ್ತದೆ :
  • ಬೆಂಗಳೂರು – ಟೋಟಲ್ ಕನ್ನಡ ಮಳಿಗೆ (ಜಯನಗರ)
  • ಬೆಂಗಳೂರು – ನವಕರ್ನಾಟಕ ಪುಸ್ತಕ ಮಳಿಗೆ (ಗಾಂಧಿನಗರ)
  • ಮೈಸೂರು – ಗೀತಾ ಬುಕ್ ಹೌಸ್
  • ಶಿವಮೊಗ್ಗ – ಡಯಾನಾ ಬುಕ್ ಗ್ಯಾಲರಿ
  • ಧಾರವಾಡ – ಭಾರತ ಬುಕ್ ಡಿಪೊ
ಈ ಹೊತ್ತಗೆಯನ್ನು ಈಗಲೇ ಕೊಳ್ಳಲು ಕೆಳಗಿನ ಕೊಂಡಿಗೆ ಭೇಟಿ ಕೊಡಿ:

 

 

ಮಕ್ಕಳ ವಿಕಸನಕ್ಕೆ ತಾಯ್ನುಡಿ ಶ್ರೇಷ್ಠ

ಇಂದು ಮಕ್ಕಳ ದಿನಾಚರಣೆ. ಮಕ್ಕಳ ಒಳಿತನ್ನು ಚರ್ಚಿಸಲು ಒಂದೊಳ್ಳೆಯ ವೇದಿಕೆಯೇ ಸರಿ. ಹಿಂದಿನಿಂದಲೂ ಶಾಲೆಗಳಲ್ಲಿ ಸಿಹಿ ಹಂಚಿ, ಪಂಡಿತ್ ನೆಹರು ಅವರ ಕುರಿತು ವಿಚಾರ ಗೋಷ್ಠಿಗಳನ್ನು ನಡೆಸುವುದಕ್ಕೆ ಸೀಮಿತವಾಗಿದೆ ಈ ದಿನದ ಆಚರಣೆ. ಇದಕ್ಕೆ ಮೀರಿ ಶಾಲಾ ವಲಯಗಳಲ್ಲಿ, ಪೋಷಕರ ವಲಯಗಳಲ್ಲಿ ಮಕ್ಕಳ ಒಳಿತನ್ನು ಕುರಿತು ಆಳವಾದ ಚಿಂತನೆಯ ಕೊರತೆ ಇಂದಿನ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಅದರಲ್ಲೂ ಮಕ್ಕಳ ಕಲಿಕೆಯ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬರುವ ತುರ್ತು ಬೇಡಿಕೆ ಇದೆ.

ಎಳವೆಯಿಂದ ಮಕ್ಕಳಿಗೆ ಕೈ ಹಿಡಿದು ನಡೆಯಲು ಕಲಿಸುವ ಪೋಷಕರು, ಮಕ್ಕಳ ಕಲಿಕೆಯಲ್ಲಿ ಇದೇ ತರ್ಕವನ್ನು ಬಳಸುವುದಿಲ್ಲ. ಮಕ್ಕಳು ನಡೆಯುವುದನ್ನು ಕಲಿಯುವುದಕ್ಕೆ ಮುನ್ನ ಅವರನ್ನು ಒಂದೆರಡು ತಿಂಗಳು ಕೈ ಹಿಡಿದು ನಡೆಸಬೇಕಾಗುತ್ತದೆ. ನಂತರ ತಾವೇ ನಡೆಯುವುದನ್ನು ಮಕ್ಕಳು ಕಲಿಯುತ್ತಾರೆ. ಒಮ್ಮೆ ಕಾಲುಗಳು ಬಲಿತರೆ ಓಡುವುದು, ಜಿಗಿಯುವುದು ಎಲ್ಲವನ್ನೂ ಮಕ್ಕಳು ತಾವೇ ಕಲಿಯುತ್ತಾರೆ. ಅಂತೆಯೇ, ಕಲಿಕೆಯಲ್ಲಿ ವಿಷಯಗಳನ್ನು ಗ್ರಹಿಸಲು ಮಕ್ಕಳಿಗೆ ಅವರ ತಾಯ್ನುಡಿಯೇ ಆಧಾರವಾಗಿರುತ್ತದೆ. ತಾಯ್ನುಡಿಯು, ಮೊದಲ ಹಂತದ ಕಲಿಕೆಯಲ್ಲಿ ಮಗುವನ್ನು ಕೈ ಹಿಡಿದು ನಡೆಸುತ್ತದೆ. ನಂತರ ದಿನಗಳಲ್ಲಿ ತಾಯ್ನುಡಿಯ ಅಡಿಪಾಯದ ಮೇಲೆ ಕಲಿತ ವಿಷಯಗಳಿಂದ ಹೆಚ್ಚಿನ ಕಲಿಕೆಗೆ ಮಕ್ಕಳು ತಯಾರಾಗುತ್ತಾರೆ. ಈ ರೀತಿ ತಾಯ್ನುಡಿಯ ಮೂಲಕ ಹೆಚ್ಚಿನ ವಿಷಯಗಳನ್ನು ಕಲಿಸುವ ಪದ್ದತಿಯಿಂದ ಮುಂದುವರೆದ ನಾಡುಗಳು ಯಶಸ್ಸು ಸಾಧಿಸಿವೆ. ದುರಂತವೆಂದರೆ ನಮ್ಮ ದೇಶದಲ್ಲಿ ಈ ವಿಷಯದ ಕುರಿತು ಪೋಷಕರಲ್ಲೇ ಅರಿವು ಇಲ್ಲದಾಗಿದೆ.

ಲಕ್ಸಂಬರ್ಗ್ ಎಂಬ ದೇಶದಲ್ಲಿ ನರ್ಸರಿ ಶಾಲೆಯ ಮಗುವೊಂದು ಶಾಲೆಯಲ್ಲಿ ಪೋರ್ಚುಗೀಸ್ ನುಡಿಯಲ್ಲಿ ಮಾತನಾಡಿದ್ದಕ್ಕೆ ಅಲ್ಲಿಯ ಶಿಕ್ಷಕರು ಆ ಮಗುವನ್ನು ಶಿಕ್ಷಿಸಿದ್ದಾರೆ. ಶಾಲೆಯಲ್ಲಿ ಮಕ್ಕಳು ಅಲ್ಲಿನ ನುಡಿಗಳಾದ ಜರ್ಮನ್, ಲುಕ್ಸಂಬರ್ಗಿಶ್ ಅಥವಾ ಫ್ರೆಂಚ್ ನುಡಿಯಲ್ಲೇ ಮಾತಾಡಬೇಕು ಅನ್ನುವ ನಿಯಮ ಇರುವ ಕಾರಣ ಶಾಲೆಯ ಸಿಬ್ಬಂದಿ ಮಗುವನ್ನು ಶಿಕ್ಷಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಗೆ ಅಲ್ಲಿನ ಮಾಧ್ಯಮ ವರ್ಗದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಂತಹ ಘಟನೆಗಳನ್ನು ಅಲ್ಲಿನ ಸಮಾಜ ಎಷ್ಟು ಸೂಕ್ಷ್ಮವಾಗಿ ಪರಿಗಣಿಸಿದೆ ಅನ್ನುವುದನ್ನು. ನಮ್ಮಲ್ಲಿನ ಬಹುತೇಕ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಹೊರೆತು ಬೇರೆ ನುಡಿಗಳನ್ನು ಮಾತನಾಡುವುದೇ ನಿಷೇದಿಸಲಾಗಿದೆ! ಹಾಗೊಮ್ಮೆ ಮಾತನಾಡಿದರೆ ಅದಕ್ಕೆ ದಂಡ ತೆರಬೇಕಾಗುತ್ತದೆ. ಅಷ್ಟೇ ಏಕೆ ಪ್ರತಿದಿನ ಈ ತಪ್ಪಿಗೆ ಶಿಕ್ಷಕರಿಂದ ಹೊಡೆತ ತಿನ್ನುವ ಅಸಂಖ್ಯಾತ ಮಕ್ಕಳಿದ್ದಾರೆ. ಇದನ್ನು ಸಹಜವೇನೋ ಎಂಬಷ್ಟು ಹಗುರವಾಗಿ ಪರಿಗಣಿಸಿದೆ ನಮ್ಮ ಸಮಾಜ! ಇತ್ತೀಚಿಗೆ ತೆಲಂಗಾಣದಲ್ಲಿ ಒಂದನೇ ತರಗತಿಯ ಹುಡುಗನನ್ನು ಇಂಗ್ಲೀಷ್ ಮಾತನಾಡಲಿಲ್ಲ ಅನ್ನುವ ಕಾರಣಕ್ಕೆ ಕ್ರೂರವಾಗಿ ಶಿಕ್ಷಿಸಿದ ಪರಿಣಾಮ ಮಗು ಸಾವನ್ನಪ್ಪಿದ ಘಟನೆ ಮಾಧ್ಯಮಗಳಲ್ಲಿ ವರದಿಯಾಯಿತು. ಇಂತಹ ಘಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳದಿದ್ದಲ್ಲಿ ಮಾಧ್ಯಮಗಳಲ್ಲಿ ಚರ್ಚೆಯಾಗುವುದೇ ಇಲ್ಲ! ಇದೇ ಪರಿಸ್ಥಿತಿ ಆಫ್ರಿಕಾದ ದೇಶಗಳಲ್ಲೂ ಇದೆ. ಅಲ್ಲಿನ ಮಗುವೊಂದು ಶಾಲೆಯಲ್ಲ್ಲಿ ತನ್ನ ನುಡಿಯಲ್ಲಿ ಮಾತನಾಡಿದ್ದಕ್ಕೆ, ಇಂಗ್ಲೀಷಿನಲ್ಲಿ “ನಾನು ನನ್ನ ನುಡಿಯಲ್ಲಿ ಮಾತನಾಡುವುದಿಲ್ಲ” ಎಂದು ೫೦೦ ಸಲ ಬರೆಯುವ ಶಿಕ್ಷೆ ನೀಡಿರುವ ಘಟನೆ ಕಳೆದ ತಿಂಗಳಷ್ಟೇ ವರದಿಯಾಗಿತ್ತು. ಜಗತ್ತಿನ ಮುಂದುವರೆದ ನಾಡುಗಳಲ್ಲಿ ಈ ರೀತಿಯ ವರ್ತನೆ ಕಾಣುವುದಿಲ್ಲ. ಭಾರತ ಮತ್ತು ಆಫ್ರಿಕಾದಂತಹ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿದ್ದ, ಹಿಂದುಳಿದಿರುವ ದೇಶಗಳಲ್ಲಿ ಮಾತ್ರ ಇಂತಹ ಘಟನೆಗಳು ನಡೆಯುತ್ತಿರುವುದನ್ನು ನಾವಿಲ್ಲಿ ಗಮನಿಸಬೇಕು.

ಮಕ್ಕಳ ಸಹಜ ಸೃಜನ ಶೀಲತೆ ಹೊರ ಹೊಮ್ಮುವುದೇ ಅವರು ತಮಗೆ ಗೊತ್ತಿರುವ ನುಡಿಯಲ್ಲಿ ವಿಷಯಗಳನ್ನು ಕಲಿಯಲು ಮತ್ತು ವ್ಯಕ್ತಪಡಿಸಲು ಆದಾಗ. ಆದರೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದೇ ಅತ್ಯುತ್ತಮ ಅನ್ನುವ ತಪ್ಪು ನಂಬಿಕೆಯನ್ನು ನಮ್ಮಲ್ಲಿ ಹಲವಾರು ಪೋಷಕರು ಹೊಂದಿದ್ದಾರೆ. ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಯುನೆಸ್ಕೋ ಈ ನಡೆಯನ್ನು ಕಟುವಾಗಿ ಟೀಕಿಸುತ್ತದೆ. ಯುನೆಸ್ಕೋ ಹೇಳುವಂತೆ “ಕಲಿಕೆಯ ಸುತ್ತ ಪೋಷಕರ ಮನದಲ್ಲಿರುವ ಮೂರು ತಪ್ಪು ನಂಬಿಕೆಗಳು” ಹೀಗಿವೆ : ೧) ಮಕ್ಕಳಿಗೆ ಎರಡನೇ ನುಡಿಯನ್ನು ಕಲಿಸಲು ಅತ್ಯುತ್ತಮ ರೀತಿಯೆಂದರೆ ಅವರಿಗೆ ಅದೇ ನುಡಿಯ ಮಾಧ್ಯಮದಲ್ಲಿ ಕಲಿಸುವುದು ೨) ಎರಡನೇ ನುಡಿಯನ್ನು ಕಲಿಸಲು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪ್ರಾರಂಭಿಸಬೇಕು ೩) ಎರಡನೇ ನುಡಿಯನ್ನು ಕಲಿಯಲು ತಾಯ್ನುಡಿ / ಮನೆಯ ನುಡಿ ಅಡ್ಡಿಯಾಗುತ್ತದೆ ಅನ್ನುವುದು. ಇಲ್ಲಿ ನಾವು “ಎರಡನೇ ನುಡಿ”ಯನ್ನು “ಇಂಗ್ಲೀಷ್” ಎಂದು ಓದಿಕೊಳ್ಳಬಹುದು. ಮೂರುವರೆ ವರುಷಕ್ಕೆ ತಮ್ಮ ಮಗುವನ್ನು ಶಾಲೆಗೆ ಕಲಿಸುವ ಪೋಷಕರು, ಶಾಲೆಗೆ ಸೇರಿದ ಮೂರು ತಿಂಗಳೊಳಗೆ ತಮ್ಮ ಮಗು ಇಂಗ್ಲಿಷ್ ಮಾತಾಡುವುದನ್ನು ಕಲಿಯಬೇಕು ಎಂದು ಬಯಸುವುದು ಒಂದು ಮಗುವಿನ ಮೇಲೆ ಅವರು ಹೊರೆಸುವ ಹೊರೆಯೇ ಸರಿ. ಶಾಲೆಗೆ ಸೇರುವ ಹೊತ್ತಿಗೆ ಮಗುವೊಂದು ತನ್ನ ಮನೆಯ ನುಡಿಯನ್ನಲ್ಲದೆ ಬೇರೇನೂ ತಿಳಿದಿರುವುದಿಲ್ಲ. ಆದರೆ ಶಾಲೆಯಲ್ಲಿ ಇಂಗ್ಲಿಷ್ ನುಡಿಯಲ್ಲಿ ವಿಷಯಗಳನ್ನು ತಿಳಿಯವ ಅನಿವಾರ್ಯತೆ ಎದುರಿಸುತ್ತಾರೆ ಈ ಮಕ್ಕಳು. ಈ ರೀತಿ ಗೊತ್ತಿಲ್ಲದ ನುಡಿಯಲ್ಲಿ ಕಲಿಸುವ ಬಗೆಯನ್ನು “ಮುಳುಗಿಸುವಿಕೆ” (submersion) ಎಂದು ಯುನೆಸ್ಕೋ ಹೆಸರಿಸಿದೆ. ಅಂದರೆ, ಈಜು ಗೊತ್ತಿಲ್ಲದ ಮಗುವೊಂದನ್ನು ನೀರಿಗಿಳಿಸುವುದಕ್ಕೆ ಸಮಾನ ಎಂದರ್ಥ. ಇಂತಹ ಒತ್ತಡದ ಪರಿಸರದಲ್ಲಿ ಮಕ್ಕಳು ಹೇಗೆ ತಾನೆ ಚನ್ನಾಗಿ ಕಲಿತು ಬೆಳೆಯಲು ಆದೀತು? ಅವರ ಸೃಜನ ಶೀಲತೆ ಹೊರಹೊಮ್ಮಿಸಲು ಹೇಗೆ ತಾನೇ ಆದೀತು? ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಇಂಗ್ಲೀಷ್ ಕಲಿಕೆಯ ಅಗತ್ಯ ಪ್ರಶ್ನಾತೀತವಾಗಿದೆ. ಆದರೆ ಅದನ್ನು ಕಲಿಸುವಲ್ಲಿ ವೈಜ್ಞಾನಿಕ ರೀತಿಯನ್ನು ಅನುಸರಿಸಿದರೆ ಮಾತ್ರ ಮಕ್ಕಳು ಚನ್ನಾಗಿ ಇಂಗ್ಲಿಷ್ ಕಲಿಯಬಲ್ಲರು. ತಾಯ್ನುಡಿಯಲ್ಲಿ ಮೊದಲು ವಿಷಯಗಳ ಕಲಿಸಿ, ನಂತರ ಆ ವಿಷಯಗಳನ್ನೇ ಇಂಗ್ಲಿಷ್ ಕಲಿಕೆಯಲ್ಲಿ ಬಳಸುವ ಮೂಲಕ ಇಂಗ್ಲೀಷ್ ಕಲಿಸುವುದು ವೈಜ್ಞಾನಿಕವಾಗಿ ಒಪ್ಪಿತವಾಗಿರುವ ಪದ್ಧತಿ. ಹಾಗೆ ಮಾಡದೆ, ಇಂಗ್ಲಿಷ್ ಮಾಧ್ಯಮದಲ್ಲಿ ವಿಷಯಗಳನ್ನು ನೇರವಾಗಿ ಕಲಿಸುವುದರಿಂದ, ಮಕ್ಕಳ ಮೇಲೆ ಒತ್ತಡ ಹೇರುವುದರಿಂದ ಅಥವಾ ಕನ್ನಡದಲ್ಲಿ ಮಾತಾಡುವ ಮಕ್ಕಳನ್ನು ಶಿಕ್ಷಿಸುವುದರಿಂದ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಸಾಧ್ಯವಿಲ್ಲ. ಇದರಿಂದ ಮಕ್ಕಳ ಆತ್ಮವಿಶ್ವಾಸ ಕುಗ್ಗುತ್ತದೆ ಅಲ್ಲದೆ ಯಾವ ವಿಷಯವನ್ನೂ ಆಳವಾಗಿ ಕಲಿಯಲು ಆಗುವುದಿಲ್ಲ.

ಇಂದಿನ ಪೋಷಕರು ತಮ್ಮ ಮಕ್ಕಳ ಕಲಿಕೆಯ ಕುರಿತು ಆಳವಾದ ಚಿಂತನೆ ನಡೆಸಬೇಕಾದ ತುರ್ತು ಅವಶ್ಯಕತೆ ಇದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರು ನೀಡಬಹುದಾದ ಅತ್ಯುತ್ತಮ ಕೊಡುಗೆಯೇ ಗುಣಮಟ್ಟದ ಕಲಿಕೆಯಾಗಿದೆ. ಮಕ್ಕಳ ಕಲಿಕೆ ಹಸನಾದಾಗಲೇ ಅವರ ಬಾಳು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸುವುದರಿಂದ ಮಕ್ಕಳ ದಿನಾಚರಣೆ ಹೆಚ್ಚು ಅರ್ಥಪೂರ್ಣವೆನಿಸುವುದು.

(ನವೆಂಬರ್ ೧೪, ೨೦೧೪ ರಂದು “ಕನ್ನಡ ಪ್ರಭ” ಪತ್ರಿಕೆಯಲ್ಲಿ ಮೂಡಿಬಂದ ವಲ್ಲೀಶ್ ಕುಮಾರ್ ಅವರ ಅಂಕಣ)

 

14_11_2014_009_650b2cf4c166840e1e579fce410d8bcb