Category Archives: ಕನ್ನಡ ಮಾಧ್ಯಮ ಶಾಲೆಗಳು

ಮಹಿಳಾ ಮಂಡಲಿ ಶಾಲೆಯಲ್ಲಿ ಜರುಗಿದ ವಿಜ್ಞಾನ ಪ್ರದರ್ಶನ (2014)

ಸದ್ವಿದ್ಯಾ ಪಾಠಶಾಲೆ – ಮೈಸೂರು

1854ರಲ್ಲಿ ಆರಂಭವಾದ “ಸದ್ವಿದ್ಯಾ ಪಾಠಶಾಲೆ” ಮೈಸೂರಿನ ಅತ್ಯಂತ ಹಳೆಯ ಮತ್ತು ಹೆಸರುವಾಸಿ ಶಾಲೆಗಳಲ್ಲೊಂದು. ಈ ಶಾಲೆಗೆ 170ವರ್ಷಗಳ ಇತಿಹಾಸವಿದ್ದು 1922ರಿಂದ ಸರ್ಕಾರದ ಅನುದಾನವೂ ದೊರೆಯುತ್ತಿದೆ. ಎಲ್.ಕೆ.ಜಿ.ಯಿಂದ ಹತ್ತನೇ ತರಗತಿಯವರೆಗೆ ಮಕ್ಕಳು ಇಲ್ಲಿ ಕಲಿಯಬಹುದಾಗಿದೆ. ಆಟವಾಡಲು ಮೈದಾನ, ಪ್ರಶಾಂತವಾದ ಪರಿಸರ ಮತ್ತು ಒಳ್ಳೆಯ ಸವಲತ್ತುಗಳನ್ನು ಈ ಶಾಲೆ ಒಳಗೊಂಡಿದೆ.

IMG_20140802_111543IMG_20140802_122132

ಈ ವರುಶ ಪ್ರಾಥಮಿಕ ಶಾಲೆಯಲ್ಲಿ 205 ಮಕ್ಕಳು ಓದುತ್ತಿದ್ದು ಒಟ್ಟು 7 ಮಂದಿ ಶಿಕ್ಷಕರಿದ್ದಾರೆ. ಪ್ರೌಢ ಶಾಲೆಯಲ್ಲಿ ಒಟ್ಟು 200 ಮಕ್ಕಳು ಓದುತ್ತಿದ್ದು 10 ಮಂದಿ ಶಿಕ್ಷಕರಿದ್ದಾರೆ. 2014ರಲ್ಲಿ 1ನೇ ತರಗತಿಗೆ 26 ಮಕ್ಕಳು ಹೊಸದಾಗಿ ಸೇರಿದ್ದಾರೆ. ಈ ಶಾಲೆಯ ಎಲ್ಲಾ ಮಕ್ಕಳು ಹುರುಪಿನಿಂದ ಕಲಿಯುತ್ತಿದ್ದು ಉತ್ತಮ ಫಲಿತಂಶ ತರುತ್ತಿರುವುದಾಗಿ ಶಾಲೆಯ ಮುಖ್ಯೋಪಾಧ್ಯಯರಿಂದ ತಿಳಿದುಬರುತ್ತದೆ.

ಮಕ್ಕಳಿಗೆ ಮೊದಲ ಹಂತದಿಂದಲೇ ಚನ್ನಾಗಿ ಇಂಗ್ಲೀಷ್ ಮಾತನಾಡುವುದನ್ನು (spoken English) ಕಲಿಸಲಾಗುತ್ತದೆ. 5ನೇ ತರಗತಿಯಿಂದ ಕಂಪ್ಯೂಟರ್ ವಿಷಯವನ್ನೂ ಕಲಿಸಲಾಗುತ್ತದೆ. ವಿಜ್ಞಾನದ ತಾಂತ್ರಿಕ ಪದಗಳನ್ನು ಕಲಿಸುವಾಗ ಅವುಗಳ ಇಂಗ್ಲೀಷ್ ಹೆಸರುಗಳನ್ನೂ ತಿಳಿಸುವ ಮೂಲಕ ಮುಂದಿನ ಹಂತದ ಕಲಿಕೆಯಲ್ಲಿ ಮಕ್ಕಳಿಗೆ ನೆರವಾಗುವಂತೆ ಇಲ್ಲಿನ ಶಿಕ್ಷಕರು ನೋಡಿಕೊಳ್ಳುತ್ತಾರೆ. ಇದೆಲ್ಲದರೊಂದಿಗೆ ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾಲ್ಗೊಳ್ಳುವಿಕೆ ಹೆಚ್ಚಿರುವುಂತೆ ನೋಡಿಕೊಳ್ಳಲಾಗುತ್ತದೆ.

ವಿಳಾಸ:  ಸದ್ವಿದ್ಯಾ ಪಾಠಶಾಲೆ, ನಾರಾಯಣ ಶಾಸ್ತ್ರಿ ರಸ್ತೆ, ಮೈಸೂರು.

sadvidya-map

ನಿರ್ಮಲ ಕಾನ್ವೆಂಟ್ ಶಾಲೆ – ಬಾಳೆಹೊನ್ನೂರು

“ನಿರ್ಮಲ ಕಾನ್ವೆಂಟ್” ಹೆಸರಿನ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ 1962ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಶುರುವಾಯಿತು. ಇದು ಕಾಫಿತೋಟದ ನಡುವೆ ಇರುವ ಶಾಲೆಯಾಗಿದ್ದು, ಮಕ್ಕಳಿಗೆ ಕಲಿಕೆಯಲ್ಲಿ ತೊಡಗಲು ಪ್ರಶಾಂತ ವಾತಾವರಣ ಒದಗಿಸಿಕೊಟ್ಟಿದೆ. ಐವತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಶಾಲೆಗೆ, ಇದೀಗ ಸುವರ್ಣ ವರ್ಷ.

baaleHonnuru_1baaleHonnuru_2

ಮಲೆನಾಡಿನ ಚಿಕ್ಕ ಊರಿನಲ್ಲಿ ಇದ್ದರೂ, ಕಳೆದ ಐವತ್ತು ವರ್ಷಗಳಲ್ಲಿ ಇಲ್ಲಿ ಕಲಿತು ಹೊರಬಂದ ಸಾವಿರಾರು ಮಂದಿ, ವೈದ್ಯಕೀಯ, ಎಂಜಿನಿಯರಿಂಗ್, ಸಂಶೋಧನೆ, ಕಲೆ, ಸಾಹಿತ್ಯ, ಉದ್ಯಮ, ಮಿಲಿಟರಿ ಮುಂತಾದ ವಲಯಗಳಲ್ಲಿ ತೊಡಗಿಕೊಂಡಿದ್ದಾರಂತೆ. “ಮಕ್ಕಳು ಅಂಕ ಗಳಿಸುವುದಷ್ಟೇ ಮುಖ್ಯವಲ್ಲ, ಬದುಕಿನ ಮೌಲ್ಯಗಳನ್ನೂ ರೂಡಿಸಿಕೊಳ್ಳಬೇಕು” ಎಂಬುದು ಈ ಶಾಲೆಯ ಧ್ಯೇಯವಾಗಿದೆ. ಇಲ್ಲಿ ಓದಿದ ಮಕ್ಕಳು, ಹಲವಾರು ವಲಯಗಳಲ್ಲಿ ಯಾರಿಗೂ ಕಮ್ಮಿಯಿಲ್ಲದಂತಹ ಸಾಧನೆಗೈಯ್ಯಲು ಸಾಧ್ಯವಾದುದು ಇಲ್ಲಿ ರೂಡಿಸಿಕೊಂಡ ಮೌಲ್ಯಗಳಿಂದಲೇ ಎಂದು ಈ ಶಾಲೆಯ ಕಲಿಸುಗರು ನೆನೆಯುತ್ತಾರೆ.
baaleHonnuru_3

ಇಲ್ಲಿ ಸದ್ಯಕ್ಕೆ ಒಂದರಿಂದ ಏಳನೆಯ ತರಗತಿಯವರೆಗೆ ಸುಮಾರು ಐನೂರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದು, ಹತ್ತು ಜನ ಕಲಿಸುಗರಿದ್ದಾರೆ. ಈಗಿರುವ ಹಳೆಯ ಕಟ್ಟಡದ ಜೊತೆಗೆ ಹೊಸದಾಗಿ ಐದು ಕೋಣೆಗಳಿರುವ ಒಂದು ಕಟ್ಟಡವನ್ನು ಕಟ್ಟಲಾಗಿದ್ದು, ಇನ್ನೂ ಕೆಲವು ಕೋಣೆಗಳನ್ನು ಕಟ್ಟುವ ಹಾಗೂ ಸ್ಮಾರ್ಟ್ ತರಗತಿಗಳನ್ನು ಶುರು ಮಾಡುವ ಯೋಜನೆಯಿದೆಯಂತೆ.
ಇಲ್ಲಿನ ಪ್ರಶಾಂತ ಮತ್ತು ಸುಂದರ ಪರಿಸರದಲ್ಲಿ ಕುಣಿದು ಕುಪ್ಪಳಿಸುತ್ತಾ ಬೆಳೆಯುವ ಮಕ್ಕಳು, ತುಂಬಾ ಚುರುಕಾಗಿದ್ದು, ಸಾಂಸ್ಕ್ರುತಿಕ ಮತ್ತು ಆಟೋಟಗಳಲ್ಲಿ ಅವರ ಚುರುಕುತನ ಎದ್ದು ಕಾಣುತ್ತದೆ, ಎಂಬುದು ಹಲವು ವರ್ಷಗಳಿಂದ ಇಲ್ಲಿನ ಮುಖ್ಯಶಿಕ್ಷಕಿಯಾಗಿರುವ ಸಿಸ್ಟರ್ ಐರಿನ್ ಅವರ ಅನುಭವದ ಮಾತು.

ವಿಳಾಸ:
ನಿರ್ಮಲ ಕಾನ್ವೆಂಟ್ ಕನ್ನಡ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ,
ಬಾಳೆಹೊನ್ನೂರು,
ನರಸಿಂಹರಾಜಪುರ ತಾಲೂಕು,
ಚಿಕ್ಕಮಗಳೂರು ಜಿಲ್ಲೆ.
ಗೂಗಲ್ ಮ್ಯಾಪಿನಲ್ಲಿ ನಿರ್ಮಲ ಕಾನ್ವೆಂಟ್ ಶಾಲೆಯ ಗುರುತು:
Nirmala-Convent-Balehonnur-Map

ಬಾಲ ಬಳಗ ಶಾಲೆ – ಧಾರವಾಡ

ಸುಮಾರು 16 ವರ್ಷಗಳ ಹಿಂದೆ, ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕವೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು ಎಂಬ ಆಲೋಚನೆಯೊಂದಿಗೆ ಶುರುವಾದ ಶಾಲೆ ಇದು. ಮೊದಲ ವರ್ಷದಲ್ಲಿ ಇಬ್ಬರು ಮಕ್ಕಳಿಂದ ಶುರುವಾದ ಈ ಶಾಲೆಯಲ್ಲಿ ಇವತ್ತು ಸುಮಾರು 320 ಮಕ್ಕಳು ಓದುತ್ತಿರುವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಂತೆಯೇ ಇರುವ “ಬಾಲ ಬಳಗ” ಶಾಲೆಯು ಕಲಿಕೆ ಕ್ಷೇತ್ರದಲ್ಲಿ ಒಂದು “ವಿಶಿಷ್ಟ ಮತ್ತು ಗೆದ್ದ ಪ್ರಯೋಗ” ಎಂದೇ ಹೇಳಬಹುದು.

baalaBalaga_1

ಹೊಸ ಬಗೆಯ ಶಾಲೆಯ ಬೋರ್ಡು

ಶಾಲೆಯು ಈ ಮಟ್ಟಕ್ಕೆ ಬೆಳೆದು ನಿಲ್ಲುವಲ್ಲಿ, ಗೆಳೆಯರ, ಹಿತೈಷಿಗಳ, ಮಕ್ಕಳ ಮತ್ತು ತಂದೆ-ತಾಯಂದಿರ ಬಹಳಷ್ಟು ಪರಿಶ್ರಮವಿದೆ ಎನ್ನುತ್ತಾರೆ ಶಾಲೆಯನ್ನು ಕಟ್ಟುವ ಕನಸು ಕಂಡಿದ್ದ ಶ್ರೀ ಸಂಜೀವ ಕುಲಕರ್ಣಿ ಅವರು. “ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಶಾಲೆಗಳನ್ನು ಮೇಲ್ಮಟ್ಟಕ್ಕೆ ಕರೆದೊಯ್ಯಬಹುದು” ಎಂಬುದಕ್ಕೆ ನಿದರ್ಶನದಂತಿದೆ ಈ ಶಾಲೆ.

baalaBalaga_2

ಪಾಠ ಮಾಡುವ ಕೋಣೆ

ಕಲಿಕೆ ಕ್ರಮ ಮತ್ತು ಕಲಿಸುಗರು
ಇಲ್ಲಿ ಶಿಶುವಿಹಾರಕ್ಕೇ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತದೆ. ಶಿಶುವಿಹಾರದಿಂದ ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿಕೆ. ಎಂಟನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಕೆ ನಡೆಸಲಾಗುತ್ತದೆ. ಎಂಟರಿಂದ ಇಂಗ್ಲೀಶ್ ಮಾಧ್ಯಮಕ್ಕೆ ಒಗ್ಗಿಕೊಳ್ಳಲು ಮಕ್ಕಳಿಗೆ ನೆರವಾಗಲಿ ಎಂದು “ಇಂಗ್ಲೀಶ್ ಮಾತನಾಡುವ ಕಲಿಕೆ ತರಗತಿ”ಗಳನ್ನು ನಡೆಸಲಾಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರದ ಪಟ್ಯಕ್ರಮವನ್ನೇ ಇಲ್ಲಿ ಪಾಲಿಸಲಾಗುತ್ತಿದ್ದು, ನಾಲ್ಕನೆ ತರಗತಿಯವರೆಗಿನ ಪಟ್ಯಕ್ರಮವನ್ನು ತಂದೆ-ತಾಯಂದಿರೊಂದಿಗೆ ಸೇರಿ ಮಾಡಿಕೊಳ್ಳಲಾದ ಚಿಕ್ಕ ಚಿಕ್ಕ ಮಾರ್ಪಾಟುಗಳೊಂದಿಗೆ ಅಳವಡಿಸಿಕೊಳ್ಳಲಾಗಿದೆ.

baalaBalaga_5

ಹೆಣ್ಣುಮಗುವೊಬ್ಬಳು, ರೆಂಬೆಯ ಮೇಲೆ ಕುಳಿತ ಹಕ್ಕಿಯೊಂದನ್ನು ಜೇಡಿ ಮಣ್ಣಿನಲ್ಲಿ ಮಾಡಿದ್ದಳು.

ಮಕ್ಕಳ ಜೊತೆಜೊತೆಗೇ, ಕಲಿಸುಗರಿಗೂ, ತಂದೆ ತಾಯಂದಿರಿಗೂ ಇಲ್ಲಿ ಕಲಿಕೆ ನಡೆಯುತ್ತದೆ ಎನ್ನುತ್ತಾರೆ ಇಲ್ಲಿನ ಕಲಿಸುಗರೊಬ್ಬರು. ಇಲ್ಲಿ ಪಾಟ ಮಾಡುವ ರೀತಿಯು ಬೇರೆ ರೀತಿಯದ್ದಾದ್ದರಿಂದ, ಹೊಸದಾಗಿ ಸೇರುವ ಕಲಿಸುಗರು ಮೊದಲ ಮೂರು ತಿಂಗಳು ತರಗತಿಗಳಲ್ಲಿ ಮಕ್ಕಳ ಜೊತೆ ಕುಳಿತುಕೊಂಡೇ ಪಾಟ ಕೇಳಿಸಿಕೊಳ್ಳುತ್ತಾ ಕಲಿಸುವ ಕ್ರಮವನ್ನು ಅರಿಯಬೇಕಾಗುತ್ತದೆ.ಮಕ್ಕಳಲ್ಲಿ ಚಿಕ್ಕಂದಿನಿಂದಲೇ ವಿವಿಧತೆಯನ್ನು ಗೌರವಿಸುವ ಭಾವನೆ ಮೂಡಿಸುವ ಸಲುವಾಗಿ, ಇಲ್ಲಿ ಮಕ್ಕಳಿಗೆ ಯಾವುದೇ ಯೂನಿಫಾರ್ಮ್ ಇರುವುದಿಲ್ಲ. ನಿಜ ಜಗತ್ತನ್ನು ಸರಿಯಾಗಿ ಬಿಂಬಿಸುವ ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟುಕೊಂಡೇ ಮಕ್ಕಳು ಕಲಿಕೆಯಲ್ಲಿ ತೊಡಗಿರುತ್ತಾರೆ.

ನಮ್ಮ ತಂಡವು ಬಾಲ ಬಳಗ ಶಾಲೆಗೆ ಭೇಟಿ ಕೊಟ್ಟಾಗ,  ಮಕ್ಕಳು ಹೊಸರೀತಿಯಲ್ಲಿ ಜಾರುಬಂಡೆ ಆಡುತ್ತಿದ್ದುದು ಕಂಡು ಬಂತು.

ನಮ್ಮ ತಂಡವು ಬಾಲ ಬಳಗ ಶಾಲೆಗೆ ಭೇಟಿ ಕೊಟ್ಟಾಗ, ಮಕ್ಕಳು ಹೊಸರೀತಿಯಲ್ಲಿ ಜಾರುಬಂಡೆ ಆಡುತ್ತಿದ್ದುದು ಕಂಡು ಬಂತು.

ಪಾಟಗಳಿಂದ ಕಲಿಯುವಷ್ಟೇ ಇತರೆ ಚಟುವಟಿಕೆಗಳಿಂದಲೂ ಮಕ್ಕಳು ಕಲಿಯುತ್ತಾರೆ ಎಂಬುದನ್ನು ಚೆನ್ನಾಗೇ ಮನಗಂಡು, ಈ ಶಾಲೆಯಲ್ಲಿ ಇತರ ಚಟುವಟಿಕೆಗಳಿಗೂ ಪಾಟಗಳಷ್ಟೇ ಗಮನ ಹರಿಸುತ್ತಾರೆ. ಹಾಡುಗಾರಿಕೆ, ತಬಲ, ಯಕ್ಷಗಾನ, ಭರತನಾಟ್ಯ ಕಲೆಗಳಲ್ಲಿ ಮಕ್ಕಳಿಗೆ ತರಬೇತಿ ಕೊಡಲಾಗುತ್ತದೆ. ಮಕ್ಕಳ ಆಸಕ್ತಿ ಯಾವೆಡೆಯಿದೆ ಎಂಬುದನ್ನು ಕಂಡುಕೊಂಡು, ತಂದೆ ತಾಯಂದಿರಿಗೂ ಈ ನಿಟ್ಟಿನಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವಂತೆ ತಿಳಿಸಲಾಗುತ್ತದೆ.
ಬೇರೆ ಬೇರೆ ಕ್ಶೇತ್ರಗಳಲ್ಲಿ ಹೆಸರು ಮಾಡಿದ ಮಹನೀಯರುಗಳಿಂದ, ಆಗಾಗ ಉಪನ್ಯಾಸ ಏರ್ಪಡಿಸುವ ಮೂಲಕ ಮಕ್ಕಳಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಸಕ್ತಿ ಹುಟ್ಟಿಸಲು ಮತ್ತು ವಿಷಯಗಳನ್ನು ತಿಳಿಸಲು ಪ್ರಯತ್ನಿಸಲಾಗುತ್ತದೆ.

ಈ ಶಾಲೆಯಲ್ಲಿ ಯಾವುದೇ ಡೊನೇಶನ್ ತೆಗೆದುಕೊಳ್ಳಲಾಗುವುದಿಲ್ಲ.

ಶಾಲೆಯ ವಿಳಾಸ:
ಬಾಲ ಬಳಗ ಸ್ರುಜನಶೀಲ ಶಿಕ್ಷಣ ಪ್ರತಿಷ್ಟಾನ,
ನಿಸರ್ಗ ಬಡಾವಣೆ,
ಕರ್ನಾಟಕ ವಿಶ್ವವಿದ್ಯಾಲಯ ಹತ್ತಿರ,
ಧಾರವಾಡ – 580 003

ಗೂಗಲ್ ಮ್ಯಾಪಿನಲ್ಲಿ ಬಾಲ ಬಳಗ ಶಾಲೆಯ ಗುರುತು:Bala-balaga-dharawada-map

ಅರಿವು – ಲಿಂಗಾಂಬುದಿ ಪಾಳ್ಯ, ಮೈಸೂರು

ಕನ್ನಡ ಶಾಲೆಗಳ ಬಗ್ಗೆ ಮಾತಾಡ್ತಾ ಈ ಬಾರಿ ಮೈಸೂರಿಗೆ ಹೋಗಿ ಬರೋಣ ಬನ್ನಿ. ಮೈಸೂರಲ್ಲಿ ಲಿಂಗಾಂಬುದಿ ಪಾಳ್ಯದ ರಸ್ತೆಯಲ್ಲಿ ಒಂದು ಶಾಲೆಯಿದೆ. ‘ಒಳ್ಳೆಯ ಕಲಿಕೆಯಿಂದಲೇ ಮುಂದಿನ ಜನಾಂಗ, ನಾಡು, ನುಡಿ, ಪರಿಸರ ಇವುಗಳ ಬೆಳವಣಿಗೆ’ ಎಂದು ನಂಬಿರುವ ಕೆಲವು ಸಮಾನ ಮನಸ್ಕರು ಒಟ್ಟಾಗಿ “ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್” ಮಾಡಿಕೊಂಡು ಈ ಶಾಲೆಯನ್ನು ನಡೆಸುತ್ತಿದ್ದಾರೆ. ಪೂರ್ವ ಪ್ರಾಥಮಿಕ ತರಗತಿಯಿ೦ದ ಹತ್ತನೇ ತರಗತಿಯವರೆಗೆ ಕಲಿಯಲು ಇಲ್ಲಿ ಅವಕಾಶವಿದೆ. ಸದ್ಯಕ್ಕೆ ಒಟ್ಟು ಸುಮಾರು 180 ಮಕ್ಕಳು ಇಲ್ಲಿ ಓದುತ್ತಿದ್ದಾರೆ.

arivu_2

ಕಲಿಕೆಯ ಹೊಸತಂತ್ರ!

ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಸಾಂಸ್ಕೃತಿಕ ಬದ್ಧತೆ, ಪರಿಸರದೊಂದಿಗೆ ಹೊಂದಾಣಿಕೆ, ನಾಯಕತ್ವ ಮತ್ತು ಸಹಕಾರದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಇಲ್ಲಿ ಪರಿಸರಕ್ಕೂ, ಮಕ್ಕಳಿಗೂ ಹಿತವೆನ್ನಿಸೋ ಕಲಿಕೆಯನ್ನು ನೀಡುತ್ತಿದೆ. ಮಕ್ಕಳಿಗೆ ತಾವಿರುವ ಪರಿಸರದಿಂದಲೇ ಶಿಕ್ಷಣ ನೀಡುತ್ತಾ ಇಂದಿನ ಸ್ಫರ್ಧಾ ಪ್ರಪಂಚದಲ್ಲಿ ತಮ್ಮತನ ಕಾಯ್ದುಕೊಳ್ಳುವಂತಹ ಸುಲಭ – ಸಹಜ ಕಲಿಕೆಗೆ ಅನುವು ಮಾಡಿಕೊಡುತ್ತಿದೆ. ಪರಿಸರದ ಮೂಲಕ ಕಲಿಕೆ ಎಂದೇ ಹೊರಟಿರುವ ಅರಿವು ಶಾಲೆ ಪ್ರಕೃತಿಯ ಪಾಠಕ್ಕೆ ಮಕ್ಕಳನ್ನು ಒಡ್ಡಿದೆ. ತರಗತಿಯಲ್ಲಿ ನಡೆಯುವ ಪಠ್ಯಪುಸ್ತಕ ಶಿಕ್ಷಣದ ಜೊತೆಯಲ್ಲೇ ಪ್ರತಿವಾರ ಕೆರೆ, ಗುಡ್ಡ, ಪಕ್ಷಿ ವೀಕ್ಷಣೆ, ಸುತ್ತಲ ಗಿಡಮರಗಳ ಅಧ್ಯಯನಕ್ಕೆ ಹೋಗುತ್ತಾರೆ. ಪೋಲೀಸ್ ಸ್ಟೇಷನ್, ಇಟ್ಟಿಗೆ ಕಾರ್ಖಾನೆ, ಮ್ಯೂಸಿಯಂಗಳು, ಎಣ್ಣೆ ಗಾಣ ಹೀಗೆ ಊರಿನಲ್ಲಿರುವ ಎಲ್ಲ ಬಗೆಯ ಸ್ಥಳಗಳಿಗೆ ಹೋಗಿ ತಿಳಿವು ಹೆಚ್ಚಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ತಮ್ಮ ಕಣ್ಣಿಗೆ ಕಾಣುವ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಮಕ್ಕಳಲ್ಲಿ ಸಹಜವಾಗಿಯೇ ಕಲಿಯುವ ಆಸಕ್ತಿ ಹೆಚ್ಚುತ್ತದೆ.

arivu_1

ನುರಿತ ತರಬೇತುದಾರರಿಂದ ಪಠ್ಯೇತರ ಕಲಿಕೆ

“ಅರಿವು ಶಾಲೆ” ಮಕ್ಕಳಿಗೆ ವಿವಿಧ ಕ್ಷೇತ್ರದಲ್ಲ್ಲಿ ವಿಪುಲ ಅವಕಾಶಗಳನ್ನು ಒದಗಿಸುತ್ತಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಸುಮಾರು 8 ತರಬೇತುದಾರರು ನಿಜವಾದ ಶಿಕ್ಷಣದತ್ತ ಮಕ್ಕಳನ್ನು ಒಯ್ಯುತ್ತಿದ್ದಾರೆ. ಈಜು, ತಬಲಾ, ರಂಗಗೀತೆಗಳು, ಶಾಸ್ತ್ರೀಯ ಸಂಗೀತ, ದೇಸಿ ಆಟಗಳು, ಇಂಗ್ಲೀಷ ಸಂವಹನ, ಚಾರಣ ಮುಂತಾದ ಹಲವು ಕ್ಷೇತ್ರಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಿಸುತ್ತಾರೆ. ಹಾಂ… ನೀವು ಈ ಶಾಲೆಯ 1-2ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು ರಕ್ತ ಪರಿಚಲನೆ, ಮೂತ್ರೋತ್ಪತ್ತಿ, ಅಯಸ್ಕಾಂತ, ಮಸೂರಗಳ ಬಗ್ಗೆ ಮಾತನಾಡಿದರೆ ಅಚ್ಚರಿ ಪಡಬೇಕಿಲ್ಲ! ಆಡುನುಡಿಯಲ್ಲಿ ಕಲಿಯುವುದರಿಂದ ಮತ್ತು ಅನುಭವಗಳ ಸಮೇತ ಕಲಿಸುವ ಪದ್ದತಿ ಇರುವುದರಿಂದ ಅರ್ಥವಾಗುವಷ್ಟನ್ನು ಹೇಳುತ್ತಾರೆ. ಈ ಮಕ್ಕಳಲ್ಲಿ ಕಂಡದ್ದನ್ನೆಲ್ಲಾ ಇದೇನು? ಇದೇನು? ಎಂದು ತಿಳಿದುಕೊಳ್ಳಬೇಕೆನ್ನುವ ಕುತೂಹಲ ತೋರಿಸುವುದು ಹೆಚ್ಚಿದೆ. ಮಕ್ಕಳ ಸಹಜವಾದ ಈ ಕುತೂಹಲವನ್ನು ತುಳಿಯದೆ ತಣಿಸುವ ವಾತಾವರಣ ಇಲ್ಲಿದೆ. ಸಾಹಸ ಕ್ರೀಡೆಗಳು, ಪರ್ವತಾರೋಹಣ, ಕೆರೆ ಓಡಾಟ ಮಕ್ಕಳಿಗೆ ಸಾಕಷ್ಟು ಧೈರ್ಯ ಕಲಿಸಿದೆ.

ಪರಿಸರ ಪಾಠದ ಗುರುಗಳಾದ ಗುರು ಸಾರ್ ಮಕ್ಕಳಿಗೆ ಹಾವು ಹಿಡಿಯುವುದನ್ನು ಹೇಳಿಕೊಟ್ಟಿದ್ದಾರೆ ಅಂದ್ರೆ ನಂಬ್ತೀರಾ? ನೋಡಿ ಈ ಫೋಟೋನಾ.. ಜೀವ ಸಂಕುಲದ ಬಗ್ಗೆ ಪ್ರೀತಿ ಬೆಳೆಸಿಕೊಂಡಿರುವ ಮಕ್ಕಳು ಮುಂದೆ ಪರಿಸರ ಹಾನಿಯ ಕೆಲಸ ಮಾಡಲಾರರು ಎಂಬ ಭರವಸೆ ಮೂಡುತ್ತದೆ. ಸತತವಾಗಿ ಅರಿವು ಬಳಗ ತಮ್ಮನ್ನು ತಾವು ಕಲಿಕೆಗೆ ಒಡ್ದಿಕೊಂಡು ಮಕ್ಕಳೊಡನೆ ಒಂದಾಗಿ ಕಲಿಸುವ, ಕಲಿಕೆಯ ರೀತಿಯ ಬಗ್ಗೆ ನಿರಂತರತೆ ಕಾಯ್ದುಕೊಳ್ಳುವ ಗುರಿ ಹೊಂದಿದೆ.
ಹೆಚಿನ ಮಾಹಿತಿಗಾಗಿ ಸಂಪರ್ಕಿಸಿ:

ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್
ಲಿಂಗಾಂಬುದಿ ಪಾಳ್ಯ ರಸ್ತೆ,
ಲಿಂಗಾಂಬುದಿ ಪಾಳ್ಯ, ಶ್ರೀರಾಂಪುರ,
ಮೈಸೂರು
ದೂರವಾಣಿ: 0821-2363399
ಡಾ ಮನೋಹರ – 9901225074
ಸುದರ್ಶನ – 9480326758
ಜನಾರ್ದನ – 9008512188
ಬರ್ಟಿ ಒಲಿವೆರಾ – 9448481968
ಮಾರುತಿ – 9880530404

ಗೂಗಲ್ ಮ್ಯಾಪ್‍ನಲ್ಲಿ ಶಾಲೆಯ ಗುರುತು:

arivu_map

ಚಂದನ ಶಾಲೆ – ಶಿರಸಿ

ಮಕ್ಕಳು ಕಲಿಕೆಯನ್ನು ಕೊಂಚವೂ ಒತ್ತಡವೆಂದು ಭಾವಿಸಬಾರದು ಎಂಬ ಆಲೋಚನೆಯೊಂದಿಗೆ ಶಿರಸಿಯಲ್ಲಿ ಶುರುವಾದದ್ದು ಈ ಚಂದನ ಶಾಲೆ.ಆಟದೊಂದಿಗೆ ಪಾಟ ಎಂಬುದು ಇಲ್ಲಿಯ ಮೂಲಮಂತ್ರ. ಮಲೆನಾಡಿನ ಮಡಿಲಲ್ಲಿ, ಶಿರಸಿ ಊರಿನಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಈ ಶಾಲೆಯು “ಪ್ರಶಾಂತ ವಾತಾವರಣದ ನಡುವೆ ಕಲಿಕೆ” ಎಂಬುದಕ್ಕೆ ಹೇಳಿ ಮಾಡಿಸಿದಂತಿದೆ. ಮಕ್ಕಳಿಗೆ ಈ ಶಾಲೆಯಲ್ಲಿ ಯಾವ ಮಟ್ಟಿನ ಸ್ವಾತಂತ್ರವಿದೆಯೆಂದರೆ, ಶಾಲೆ ಶುರುವಾದ ಕೆಲ ವರ್ಷಗಳು ಸುತ್ತಮುತ್ತಲಿನ ಜನರೆಲ್ಲರೂ “ಚಂದನ ಶಾಲೆಯಲ್ಲಿ ಬರೀ ಆಟ ಆಡುಸ್ತಾವಡ” ಎಂದು ಮಾತನಾಡಿಕೊಳ್ಳುತ್ತಿದ್ದರಂತೆ. ಈಗ ಶಾಲೆಯ ಹೆಸರು ಬೆಳೆದಿದೆ, ಸುಮಾರು 40 ಕಿ.ಮೀ ದೂರದ ಊರುಗಳಿಂದಲೂ ಮಕ್ಕಳು ಈ ಶಾಲೆಗೆ ಬರುತ್ತಿದ್ದಾರೆ.

chandana_2 chandana_1

ಕಲಿಕೆ ಸಾಗುವ ಬಗೆ
ಒಂದರಿಂದಾ – ಏಳರವರೆಗೆ ಇಲ್ಲಿ ತರಗತಿಗಳಿದ್ದು, ಸುಮಾರು 380 ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಒಂದರಿಂದ – ಐದರವರೆಗೆ ಕನ್ನಡ ಮಾಧ್ಯಮದಲ್ಲೂ, ಆರು ಮತ್ತು ಏಳನೇ ತರಗತಿಗಳು ಇಂಗ್ಲೀಶ್ ಮಾಧ್ಯಮದಲ್ಲೂ ನಡೆಯುತ್ತವೆ. ಆಟದೊಂದಿಗೆ ಪಾಟ ಎಂಬ ಮೂಲಮಂತ್ರ ಹೊಂದಿರುವುದರಿಂದ, ಪಟ್ಯಕ್ರಮವನ್ನು ಕಲಿಸಲು ಬಗೆಬಗೆಯ ಆಟಗಳನ್ನು ಶಿಕ್ಷಕರೇ ಮುಂದೆನಿಂತು ಆಡಿಸುತ್ತಾರೆ. ಆ ಮೂಲಕ ಮಕ್ಕಳು ತಮಗರಿವಿಲ್ಲದಂತೆಯೇ ಪಟ್ಯಕ್ರಮದ ಮೇಲೆ ಹಿಡಿತ ಸಾಧಿಸುತ್ತಾರೆ. ಇನ್ನು, ಆಟವಾಡಲು ಇಲ್ಲಿ ಜಾಗದ ಕೊರೆತೆ ಎಂಬುದೇ ಇಲ್ಲ.ಆರು ಮತ್ತು ಏಳನೇ ತರಗತಿಯ ಮಕ್ಕಳಿಗೆ ಆಟವನ್ನು ಬೇಕಂತಲೇ ಕಡಿಮೆ ಮಾಡಿದ್ದರೂ, ಮಿಕ್ಕ ಶಾಲೆಗಳಿಗಿಂತ ಹೆಚ್ಚಿನ ಸಮಯವನ್ನು ಆಟದಲ್ಲಿ ಕಳೆಯುತ್ತಾರೆ. ಸ್ವಾಭಾವಿಕವಾಗಿಯೇ ಇಲ್ಲಿಯ ಮಕ್ಕಳ ಪ್ರತಿಭೆಯು ಅರಳಿದೆ. ಶಿರಸಿಯ ಕೆಲವರು ಇಂಗ್ಲೀಶ್ ಮಾಧ್ಯಮದಲ್ಲಿ ಓದುತ್ತಿದ್ದ ತಮ್ಮ ಮಕ್ಕಳನ್ನು ನಡುವಿನಲ್ಲಿ ಈ ಶಾಲೆಗೆ ಸೇರಿಸಿದ್ದಾರೆ ಎಂಬುದು, ಚಂದನ ಶಾಲೆಯ ಮಕ್ಕಳ ಪ್ರತಿಭೆಯು ಹೆಸರುವಾಸಿಯಾಗಿರುವುದಕ್ಕೆ ಸಾಕ್ಷಿಯಂತಿದೆ.

chandana_4 chandana_3

ಹೆಚ್ಚಿನ ವಿವರಗಳು
ಶಿರಸಿಯಿಂದ ಮತ್ತು ಸುತ್ತಮುತ್ತಲ 40 ಕಿ.ಮೀ ದೂರದಿಂದ ಮಕ್ಕಳು ಶಾಲೆಗೆ ಬಂದು ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದೆ.
ತಂದೆ ತಾಯಂದಿರಿಗೆ ಬೆಳಗ್ಗೆ ಬೇಗ ಅಡಿಗೆ ಮಾಡುವ ಹೊರೆಯನ್ನು ತಪ್ಪಿಸುವ ಮತ್ತು ಮಕ್ಕಳಿಗೆ ಪ್ರತಿದಿನ ಬಿಸಿ ಬಿಸಿ ಊಟದ ಸವಿ ಒದಗಿಸಲು, ಈ ಶಾಲೆಯಲ್ಲಿಯೇ ಒಬ್ಬ ಅಡಿಗೆಯವರನ್ನು ನೇಮಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಬಸ್ಸಿನ ಶುಲ್ಕವಿದ್ದು, ಅದು ಮಗುವಿನ ಮನೆಯ ದೂರದ ಮೇಲೆ ನಿಂತಿರುತ್ತದೆ.

ದೀನಬಂಧು ಶಾಲೆ – ಚಾಮರಾಜನಗರ

1992ರಿಂದಲೂ ಚಾಮರಾಜನಗರದಲ್ಲಿ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟವಾದ ಸೇವೆ ಸಲ್ಲಿಸುತ್ತಿರುವ ಶಾಲೆಯಿದು, ದೀನಬಂಧು ಶಾಲೆ. ಸದ್ಯಕ್ಕೆ ಇಲ್ಲಿ 1-10ರವರೆಗೆ ಸುಮಾರು 436 ಮಕ್ಕಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.

deenabandhu_1

ಶಾಲೆಯ ಹೊರನೋಟ

ಗುಣಮಟ್ಟದ ಶಿಕ್ಷಣ
ನಾಡಿನ ನಾಳೆಗಳು ಕಂಗೊಳಿಸುವಂತಾಗಬೇಕೆಂದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದೊಂದೇ ದಾರಿ ಎಂಬುದನ್ನರಿತುಕೊಂಡು, ಶ್ರೀ ಜಯದೇವ್ ಅವರು ದೀನಬಂಧು ಶಾಲೆಯನ್ನು ಕಟ್ಟುವ ಕೆಲಸಕ್ಕೆ ಕೈ ಹಾಕಿದರು. “ಮಕ್ಕಳು ಒಡನಾಡುತ್ತಾ ಕಲಿಯಬೇಕು, ಮತ್ತು ಶಿಕ್ಷಕರು ಮಕ್ಕಳೊಂದಿಗೆ ಬೆರೆತು ಒಂದಾಗಬೇಕು, ಆಗ ಕಲಿಕೆಯ ಮಟ್ಟ ತಾನಾಗೇ ಮೇಲೇರತೊಡಗುತ್ತದೆ” ಎಂಬುದನ್ನು ಇಲ್ಲಿ ಕಂಡುಕೊಳ್ಳಲಾಗಿದೆ. ಹಾಗಾಗಿ, ಇಲ್ಲಿ ತರಗತಿಗಳನ್ನೂ ಮತ್ತು ತರಗತಿಗಳ ಒಳಗೆ ಕೂರುವ ರೀತಿಯನ್ನೂ ಬೇರೆಯೇ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ.

deenabandhu_2

ಮಕ್ಕಳು ಇತರೆ ತರಗತಿಯವರೊಡನೆ ಬೆರೆಯಲು ಅನುವಾಗುವಂತೆ, ತರಗತಿಗಳನ್ನು hexagon ಮಾದರಿಯಲ್ಲಿ ಕಟ್ಟಲಾಗಿದೆ

deenabandhu_3


ತರಗತಿಗಳ ಒಳಗೆ ಮಕ್ಕಳು ಸುತ್ತ ಕುಳಿತುಕೊಂಡರೆ, ಶಿಕ್ಷಕರು ನಡುವಿನಲ್ಲಿ ನಿಂತುಕೊಳ್ಳುತ್ತಾರೆ. (ಒಂದನೇ ತರಗತಿಯ ವಿಶಿಷ್ಟ ಕುರ್ಚಿಗಳು)

ಇಲ್ಲಿ ಓದುತ್ತಿರುವ ಮಕ್ಕಳು ವಿಷಯಗಳ ಮೇಲೆ ಹಿಡಿತ ಸಾಧಿಸಿರುವುದು ಅವರನ್ನು ಮಾತನಾಡಿಸಿದ ಕೂಡಲೇ ಕಂಡುಬರುತ್ತದೆ. ಯಾವುದೇ ಅಂಜಿಕೆಯಿಲ್ಲದೆ ಎಲ್ಲರೊಂದಿಗೆ ವಿಷಯಗಳ ಬಗ್ಗೆ ಚರ್ಚೆಯಲ್ಲಿ ತೊಡಗಿಕೊಳ್ಳುವ ಇಲ್ಲಿಯ ಮಕ್ಕಳನ್ನು ನೋಡಿದ ಕೂಡಲೇ, ಅವರಲ್ಲಿ ಆತ್ಮಸ್ಥೈರ್ಯ ತುಂಬುವಂತಹ ವಾತಾವರಣ ಕಟ್ಟುವಲ್ಲಿ ಶಾಲೆ ಗೆದ್ದಿರುವುದು ಮನದಟ್ಟಾಗುತ್ತದೆ.

ಸಂಪನ್ಮೂಲ ಕೇಂದ್ರ
ಈ ಶಾಲೆಯಲ್ಲಿ ಕಲಿಕೆ ಸುತ್ತ ನಡೆಸಿದಂತಹ ಕೆಲ ಪ್ರಯೋಗಗಳಿಂದ ಕಂಡುಬಂದಂತಹ ವಿಷಯಗಳು, ಈ ಶಾಲೆಯ ಮಟ್ಟಿಗೆ ಮಾತ್ರ ಸೀಮಿತವಾಗಿರದೇ, ಸುತ್ತಮುತ್ತಲಿನ ಇತರೆ ಶಾಲೆಗಳಿಗೂ ಹಬ್ಬಬೇಕು ಎಂಬುದು ಶ್ರೀ ಜಯದೇವ್ ಅವರ ಕನಸಾಗಿತ್ತು. ಆ ಕನಸನ್ನು ನನಸಾಗಿಸುವುದಕ್ಕಾಗಿ, ಸಂಪನ್ಮೂಲ ಕೇಂದ್ರವೊಂದನ್ನು ಶಾಲೆಯ ಆವರಣದಲ್ಲಿ ತೆರೆಯಲಾಗಿದ್ದು, ಚಾಮರಾಜನರದ ಸುತ್ತಮುತ್ತಲಿನ ಸುಮಾರು 30 ಸರ್ಕಾರೀ ಶಾಲೆಗಳ ಶಿಕ್ಷಕ/ಶಿಕ್ಷಕಿಯರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಅವಾಗವಾಗ ದೀನಬಂಧು ಶಾಲೆಯ ನುರಿತ ಶಿಕ್ಷಕರು, ಸುತ್ತಲಿನ 30 ಶಾಲೆಗಳಿಗೆ ಭೇಟಿ ಕೊಟ್ಟು, ಹೊಸಹೊಸ ಪ್ರಯೋಗಗಳ ಬಗ್ಗೆ ಆಯಾ ಶಾಲೆಗಳ ಶಿಕ್ಷಕ/ಶಿಕ್ಷಕಿಯರಿಗೆ ತರಬೇತಿ ಕೊಡುವುದುಂಟು.

ಅನಾಥ ಮಕ್ಕಳಿಗಾಗಿ ಆಶ್ರಮ
ಗುಣಮಟ್ಟ ಶಿಕ್ಷಣವು ತಂದೆ-ತಾಯಿ ಇಲ್ಲದ ಮಕ್ಕಳಿಗೂ ಸಿಕ್ಕಬೇಕು ಎಂಬ ಆಶಯದೊಂದಿಗೆ, ಶ್ರೀ ಜಯದೇವ್ ಅವರು ಶಾಲೆಯಿಂದ ತುಸು ದೂರದಲ್ಲಿ ಎರಡು ಆಶ್ರಮಗಳನ್ನು ಕಟ್ಟಿಸಿದ್ದಾರೆ. ಒಂದು ಆಶ್ರಮದಲ್ಲಿ 30 ಹೆಣ್ಣುಮಕ್ಕಳಿದ್ದು, ಇನ್ನೊಂದು ಆಶ್ರಮದಲ್ಲಿ 45 ಗಂಡು ಮಕ್ಕಳು ವಾಸವಿದ್ದು ತಮ್ಮ ಓದನ್ನು ನಡೆಸುತ್ತಿದ್ದಾರೆ. ಆಶ್ರಮದಲ್ಲಿರುವ ಎಲ್ಲಾ ಮಕ್ಕಳೂ ದೀನಬಂಧು ಶಾಲೆಯಲ್ಲಿ ಬೇರೆ ಬೇರೆ ತರಗತಿಗಳಲ್ಲಿ ಓದುತ್ತಿದ್ದಾರೆ. ದೀನಬಂಧು ಆಶ್ರಮದ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಈ ವಿಡಿಯೋವನ್ನು ನೋಡಿ.

ಶಾಲೆಯ ವಿಳಾಸ ಮತ್ತು ಮ್ಯಾಪಿನಲ್ಲಿ ಶಾಲೆಯ ಗುರುತು:
ದೀನಬಂಧು ಶಾಲೆ,
ದೀನಬಂಧು ಟ್ರಸ್ಟ್, ಪಿ.ಡಬ್ಲು.ಡಿ ಕಾಲೋನಿ,
ಫಾರೆಸ್ಟ್ ನರ್ಸರಿ ಹಿಂಭಾಗ,
ಚಾಮರಾಜನಗರ – 571313

Deenabandhu_map

ಪಾಂಚಜನ್ಯ ವಿದ್ಯಾಪೀಠ – ಮಲ್ಲತ್ತಹಳ್ಳಿ, ಬೆಂಗಳೂರು

ಪಾಂಚಜನ್ಯ ವಿದ್ಯಾಪೀಟ

ಪಾಂಚಜನ್ಯ ವಿದ್ಯಾಪೀಠವು ಪಿ.ವಿ.ಪಿ. ಶಾಲೆ ಎಂದೇ ಹೆಸರುವಾಸಿ. ನಾಗರಬಾವಿಗೆ ಹತ್ತಿರದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ತಾಕಿಕೊಂಡಂತೆ ಇರುವ ಈ ಶಾಲೆ ಒಳ್ಳೆಯ ಪರಿಸರವನ್ನು ಹೊಂದಿದೆ. ಬೆಂಗಳೂರಿನ ಹಲವಾರು ಶಾಲೆಗಳಲ್ಲಿ ಇವತ್ತು ಅಪರೂಪವಾಗಿರುವ ದೊಡ್ಡ ಆಟದ ಮೈದಾನವನ್ನು ಹೊಂದಿದೆ ಪಿ.ವಿ.ಪಿ ಶಾಲೆ. ನಾಗರಬಾವಿಯಿಂದ ಕೆಂಗೇರಿ ಉಪನಗರವನ್ನು ಸೇರುವ ಹೊರರಿಂಗ್ ರಸ್ತೆಗೆ ತಾಕಿಕೊಂಡೇ ಇರುವ ಈ ಶಾಲೆಯ ಕಟ್ಟಡವು ದೊಡ್ಡದಿದ್ದರೂ, ಗೇಟಿನಿಂದ ತುಸುದೂರದಲ್ಲಿರುವುದರಿಂದ ಮತ್ತು ಸಾಕಷ್ಟು ಮರಗಿಡಗಳ ನಡುವೆ ಇರುವುದರಿಂದ, ರಸ್ತೆಯಲ್ಲಿ ಹಾದು ಹೋಗುವಾಗ ಕಣ್ಣಿಗೆ ಬೀಳದಿದ್ದರೂ ಅಚ್ಚರಿಯಿಲ್ಲ.

pvp_2ಸುಮಾರು 22 ವರುಶಗಳಿಂದ ನಡೆದುಕೊಂಡು ಬಂದಿರುವ ಈ ಶಾಲೆಯಲ್ಲಿ, ಸದ್ಯಕ್ಕೆ ಒಂದರಿಂದ ಏಳರವರೆಗೆ ಒಟ್ಟು 329 ಮಕ್ಕಳು ಓದುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಾಟ ಮಾಡಲೆಂದೇ ಹತ್ತು ಜನ ಶಿಕ್ಷಕ/ಶಿಕ್ಷಕಿಯರಿದ್ದಾರೆ. ಎಂಟರಿಂದ ಹತ್ತರವರೆಗೂ ಇದೇ ಶಾಲೆಯಲ್ಲಿ ಓದುವ ಅವಕಾಶವಿರುವುದರಿಂದ, ಇಲ್ಲಿ ಸೀಟುಗಳಿಗೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಮುಖ್ಯ ಶಿಕ್ಷಕಿ.

ಒಂದನೇ ತರಗತಿಯಿಂದ ಇಂಗ್ಲೀಶನ್ನೂ ಕಲಿಸುವ ಏರ್ಪಾಡು ಮಾಡಿರುವುದರಿಂದ, ಇಲ್ಲಿನ ಕೆಲ ಮಕ್ಕಳು ಎಂಟನೇ ತರಗತಿಗೆ ಇಂಗ್ಲೀಶ್ ಮಾಧ್ಯಮ ಶಾಲೆಗೆ ಸೇರಿಕೊಂಡು ಸಲೀಸಾಗಿ ತಮ್ಮ ಓದನ್ನು ಮುಂದುವರೆಸುತ್ತಾರೆ ಎಂದು ಹೇಳುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ. ಪಾಟದ ಹೊರತಾಗಿ, ಒಂದನೇ ತರಗತಿಯಿಂದಲೇ ಸಂಗೀತ ಕಲಿಕೆ, ಮೂರನೇ ತರಗತಿಯಿಂದ ಕಂಪ್ಯೂಟರ್ ಕಲಿಕೆ ಮತ್ತು ಐದನೇ ತರಗತಿಯಿಂದ ಯೋಗ ಕಲಿಕೆಗೆ ಏರ್ಪಾಡು ಮಾಡಲಾಗಿದೆ. ಸುತ್ತ ಮುತ್ತಲ ಬಡಾವಣೆಗಳಲ್ಲಿ ಶಾಲೆಯು ಹೆಸರುವಾಸಿಯಾಗಿದ್ದು, ಐದಾರು ಕಿಲೋಮೀಟರು ದೂರದ ಬಡಾವಣೆಗಳಿಂದಲೂ ಇಲ್ಲಿಗೆ ಮಕ್ಕಳು ಬರುತ್ತಾರೆ. ದೂರದಿಂದ ಬರುವ ಮಕ್ಕಳಿಗೆ ಅನುಕೂಲವಾಗಲೆಂದು, ಒಂದು ವ್ಯಾನಿನ ಏರ್ಪಾಡು ಮಾಡಲಾಗಿದೆ.

ಪ್ರತೀ ವರುಶದಂತಯೇ ಈ ವರುಶವೂ ಶಾಲೆಗೆ ದಾಖಲಾತಿ ಕೆಲಸವು ಏಪ್ರಿಲ್ ತಿಂಗಳಲ್ಲಿ ಶುರುವಾಗಲಿದೆ. ಈ ಶಾಲೆಗೆ ತಮ್ಮ ಮಗುವನ್ನು ಸೇರಿಸಬಯಸುವವರು, ಏಪ್ರಿಲ್ ತಿಂಗಳಲ್ಲಿ ಶಾಲೆಯ ಆಡಳಿತದವರನ್ನು ಸಂಪರ್ಕಿಸಬಹುದಾಗಿದೆ.

ಗೂಗಲ್ ಮ್ಯಾಪಿನಲ್ಲಿ ಶಾಲೆಯ ಗುರುತು:
PVP-school-Mallattahalli-Route-map

ಸಂತ ಜೇಮ್ಸ್ ಶಾಲೆ – ಹೆಬ್ಬಾಳ, ಬೆಂಗಳೂರು

ಸಂತ ಜೇಮ್ಸ್ ಶಾಲೆ

ಬೆಂಗಳೂರಿನ ಉತ್ತರ ಭಾಗದಲ್ಲಿರುವ ಹೆಬ್ಬಾಳದ ಬಳಿ ಮರಿಯಣ್ಣನಪಾಳ್ಯ ಎಂಬ ಬಡಾವಣೆಯಲ್ಲಿ ಸಂತ ಜೇಮ್ಸ್ ಶಾಲೆ ಇದೆ. 1944 ರಿಂದ ಇಂದಿನವರೆಗೆ, ಅಂದರೆ ಸುಮಾರು 70 ವರ್ಷಗಳ ಕಾಲ, ನಡೆದುಕೊಂಡು ಬಂದಿರುವ ಶಾಲೆ ಇದಾಗಿದ್ದು, ಈ ಬಡಾವಣೆಯ ಸುತ್ತ ಒಳ್ಳೆಯ ಹೆಸರು ಗಳಿಸಿದೆ. ಶಾಲೆಯ ಪರಿಸರ ಅತ್ಯಂತ ಚೊಕ್ಕಟವಾಗಿದ್ದು ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಪ್ರಶಾಂತವಾಗಿದೆ. ಒಂದರಿಂದ ಹತ್ತನೆಯ ತರಗತಿಯವರೆಗೆ ಇಲ್ಲಿ ಕಲಿಯಬಹುದಾಗಿದ್ದು, ಸುಮಾರು 550 ಮಕ್ಕಳು ಇಲ್ಲಿ ಓದುತ್ತಿದ್ದಾರೆ. ವಿಶಾಲವಾದ ಕೊಠಡಿಗಳು, ಆಟದ ಮೈದಾನ ಸೇರಿದಂತೆ ಉತ್ತಮವಾದ ವ್ಯವಸ್ಥೆಗಳನ್ನು ಹೊಂದಿರುವ ಈ ಶಾಲೆಗೆ 2012ರಲ್ಲಿ ಕರ್ನಾಟಕ ಸರ್ಕಾರದಿಂದ ಅನುದಾನ ದೊರೆತಿದೆ.

ಕಾಲಕ್ಕೆ ತಕ್ಕಂತೆ ಇಂದಿನ ಕಲಿಕೆಗೆ ಬೇಕಾಗುವ ಕೆಲವು ಬದಲಾವಣೆಗಳನ್ನು ಈ ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಒಂದನೇ ತರಗತಿಯಿಂದ ಇಂಗ್ಲಿಶ್ ಕಲಿಕೆ ಮತ್ತು ಐದನೇ ತರಗತಿಯಿಂದ ಕಂಪ್ಯೂಟರ್ ಕಲಿಕೆ ನಡೆಸಲಾಗುತ್ತಿದ್ದು, ಪರಿಣಾಮಕಾರಿ ಕಲಿಕೆಗಾಗಿ ಸ್ಮಾರ್ಟ್ ಕ್ಲಾಸ್ ಅಳವಡಿಸಿಕೊಳ್ಳಲಾಗಿದೆ.

ಮೊದಲ ಹಂತದಲ್ಲಿ ಕನ್ನಡದಲ್ಲೇ ಕಲಿತ ಮಕ್ಕಳು ಮುಂದೆ ಸರಾಗವಾಗಿ ಇಂಗ್ಲಿಶ್ ಮಾಧ್ಯಮಕ್ಕೆ ಹೊಂದಿಕೊಂಡು ಉತ್ತಮ ಫಲಿತಾಂಶ ಪಡೆದಿರುವುದನ್ನು ಶಾಲೆಯ ಮುಖ್ಯಸ್ತರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವರ್ಷವೆಲ್ಲ ಒಂದಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು (ಹಾಡುವ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ) ಹಮ್ಮಿಕೊಂಡು ಮಕ್ಕಳ ಸೃಜನಶೀಲತೆಯನ್ನು ಬೆಳೆಸುವ ಪ್ರಯತ್ನವೂ ಇಲ್ಲಿ ನಡೆಯುವುದಂತೆ.

ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಬಯಸುವರು ಏಪ್ರಿಲ್ ತಿಂಗಳಲ್ಲಿ ಶಾಲೆಯ ಆಡಳಿತದವರನ್ನು ಸಂಪರ್ಕಿಸಬಹುದು.
ಶಾಲೆಯ ವಿಳಾಸ ಮತ್ತು ದಾರಿ (ಮ್ಯಾಪು) ಕೆಳಕಂಡಂತಿದೆ:
ಸಂತ ಜೇಮ್ಸ್ ಶಾಲೆ,
ನಾಗವಾರ ರಸ್ತೆ, ಮರಿಯಣ್ಣನಪಾಳ್ಯ,
ಹೆಬ್ಬಾಳ, ಬೆಂಗಳೂರು – 24.

ಶಾಲೆಯಿರುವ ಜಾಗ ಗುರುತಿಸಲ್ಪಟ್ಟಿರುವ ಮ್ಯಾಪು:

St James' school - hebbala - map-location

ಮಹಿಳಾಮಂಡಲಿ- ನರಸಿಂಹರಾಜ ಕಾಲೋನಿ, ಬೆಂಗಳೂರು

ಬೆಂಗಳೂರು ದಕ್ಷಿಣದಲ್ಲಿ ಬಸವನಗುಡಿ ಕನ್ನಡ ಸಂಸ್ಕೃತಿಯ ಸಂತೆಯಿದ್ದಂತೆ ಎಂಬುದೊಂದು ನಾಣ್ಣುಡಿ. ಇಲ್ಲಿ ಇಂದಿಗೂ ಕನ್ನಡದ ಕಂಪು ಸೊಂಪಾಗಿಹುದನ್ನು ಕಾಣಬಹುದು. ನಾಡಿನ ಅನೇಕ ಸಾಹಿತಿ, ಕಲಾವಿದರು, ಗಣ್ಯರ ಮನೆಗಳು ಇಲ್ಲಿವೆ. ಕನ್ನಡದ ಹತ್ತಾರು ಚಟುವಟಿಕೆಗಳಿಗೆ ತವರು ಬಸವನಗುಡಿ. ಇಂಥಾ ಬಸವನಗುಡಿಯ ನರಸಿಂಹರಾಜ ಕಾಲೋನಿಯಲ್ಲಿರೋ ಮಹಿಳಾ ಮಂಡಲಿ ವಿದ್ಯಾಸಂಸ್ಥೆ ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಬೇಕೆನ್ನೋ ಈ ಭಾಗದ ತಾಯಿತಂದೆಯರಿಗೆ ಅಕ್ಕರೆಯ ಶಾಲೆ. ಸ್ವಂತಕಟ್ಟಡ ಮತ್ತೊಂದು ಪುಟ್ಟ ಆಟದ ಮೈದಾನ ಹೊಂದಿರುವ ಈ ಶಾಲೆಯು ಮಕ್ಕಳಿಗಂತೂ ಕಲಿಕೆಯ ಮತ್ತು ತಮ್ಮ ಪ್ರತಿಭೆಯನ್ನು ಉಕ್ಕಿಚಿಮ್ಮಿಸುವ ಸ್ಪೂರ್ತಿ ತಾಣವಾಗಿದೆ.

mahila_1ಕನ್ನಡದ ನುಡಿಗುಡಿ
ಕನ್ನಡ ಮಾಧ್ಯಮದಲ್ಲಿ ಶಿಶುವಿಹಾರದಿಂದ ಏಳನೆ ತರಗತಿಯವರೆಗೆ ಕಲಿಸುವ ವ್ಯವಸ್ಥೆ ಇಲ್ಲಿದೆ. 7ನೇ ತರಗತಿಯಲ್ಲಿ ಸರಾಸರಿ 90% ಮಕ್ಕಳು A ಶ್ರೀಣಿಯಲ್ಲಿ ಉತ್ತೀರ್ಣರಾಗಿ ನಗರದ ಬೇರೆ ಬೇರೆ ಪ್ರೌಢ ಶಾಲೆಗಳಲ್ಲಿ ಓದುತ್ತಿದ್ದಾರೆ. ಈ ಶಾಲೆಯಲ್ಲಿ ಕಲಿತಿರುವ ಅನೇಕರು ಇಂದು ಸಮಾಜದಲ್ಲಿ ಯಶಸ್ವಿ ಉದ್ಯಮಿಗಳಾಗಿ, ಉನ್ನತ ನೌಕರಿ ಹೊಂದಿದವರಾಗಿ, ದೇಶ ವಿದೇಶಗಳಲ್ಲೂ ನೆಲೆಸಿದ್ದಾರೆ. 2 ವರ್ಷಗಳಿಗೊಮ್ಮೆ “ಪ್ರಾಜೆಕ್ಟ್ ಡೇ” ನಡೆಯುತ್ತದೆ. ಇದರಡಿಯಲ್ಲಿ ಮಕ್ಕಳು ವಿಜ್ಞಾನ ಮತ್ತು ಪರಿಸರಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳ ಬಗ್ಗೆ ಪ್ರಯೋಗಗಳ ಮೂಲಕ ಇತರರಿಗೆ ತಿಳಿಸಿಕೊಡುತ್ತಾರೆ.

ಪಠ್ಯೇತರ ಚಟುವಟಿಕೆಯಲ್ಲಿ ಸದಾಮುಂದು
ರಾಜ್ಯಸರ್ಕಾರಿ ಪಠ್ಯಕ್ರಮವಷ್ಟೇ ಅಲ್ಲದೆ ಇಲ್ಲಿ ಇಂಗ್ಲೀಷಿನಲ್ಲಿ ಸಂಭಾಷಣಾ ತರಬೇತಿ (ಸ್ಪೋಕನ್ ಇಂಗ್ಲೀಷ್) ಯೋಗ, ಟೇಬಲ್ ಟೆನ್ನಿಸ್, ನೀತಿಪಾಠ, ಭಗವದ್ಗೀತೆ ಮೊದಲಾದ ವಿಷಯಗಳನ್ನೂ ಇಲ್ಲಿ ಕಲಿಸುತ್ತಾರೆ. ಹಲವೊಮ್ಮೆ ಇಂತಹ ತರಬೇತಿಗಳಿಗೆ ತಗಲುವ ವೆಚ್ಚವನ್ನು ಶಾಲೆಯೇ ಭರಿಸುತ್ತದೆ. ಪ್ರತಿಭಾ ಕಾರಂಜಿಯಂತಹ ಹಲವಾರು ಸ್ಪರ್ಧೆಗಳಲ್ಲಿ ಮಹಿಳಾ ಮಂಡಲಿ ಶಾಲೆಯ mahilamandaliಮಕ್ಕಳು ಪಾಲ್ಗೊಂಡು ಜಿಲ್ಲಾಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ. ಇದಲ್ಲದೆ ಕಲೆ, ನೃತ್ಯ, ಜನಪದ ಹಾಡು, ನಾಡಗೀತೆ, ರಾಷ್ಟ್ರಗೀತೆ, ದೇವರನಾಮ, ಹೀಗೆ ಪ್ರತಿ ವರ್ಷ ಪ್ರತೀ ತರಗತಿಗೆ ಸುಮಾರು 14 ಬೇರೆ ಬೇರೆ ಸ್ಪರ್ಧೆಗಳು ನಡೆಯುತ್ತದೆ. ಇದಲ್ಲದೆ ವಾರ್ಷಿಕ ಕ್ರೀಡಾ ಸ್ಪರ್ಧೆಗಳು. 2ವರ್ಷಕ್ಕೊಮ್ಮೆ ಸಾಂಸ್ಕೃತಿಕ ಕಾರ್ಯಕ್ರಮವನ್ನೊಳಗೊಂಡ “ಶಾಲಾ ದಿನಾಚರಣೆ” ನಡೆಯುತ್ತದೆ. ಸಮುದಾಯ ಶಿಕ್ಷಣದ ಅಡಿಯಲ್ಲಿ ಪ್ರತೀ ವರ್ಷ ಕನಿಷ್ಠ ಮೂರು ಬಾರಿ ಪೋಷಕರೊಂದಿಗೆ ಸಭೆ ನಡೆಯುತ್ತದೆ. ವಿದ್ಯಾರ್ಥಿಗಳಿಗೆ ಪ್ರತೀ ಶನಿವಾರ ಮಕ್ಕಳ ಅಂಕಣಗಳುಳ್ಳ ದಿನಪತ್ರಿಕೆಯನ್ನು(ಸಂಯುಕ್ತ ಕರ್ನಾಟಕ) ಉಚಿತವಾಗಿ ಹಂಚಲಾಗುತ್ತದೆ. ಪ್ರತಿವರ್ಷ ಶಾಲೆಯಿಂದ ಶೈಕ್ಷಣಿಕ ಪ್ರವಾಸವನ್ನೂ ಏರ್ಪಡಿಸಲಾಗುತ್ತದೆ.

ಕಲಿಕೆಯೆಂಬ ಪರಂಪರೆ
ಈ ಶಾಲೆ ಆರಂಭವಾಗೇ ಸುಮಾರು ಅರವತ್ತು ವರ್ಷಗಳಾಗಿವೆ. ಕರ್ನಾಟಕ ರಾಜ್ಯ ಸರ್ಕಾರದ ಅನುದಾನಿತ ಶಾಲೆಯಾದ ಮಹಿಳಾ ಮಂಡಲಿಯ ಶಿಕ್ಷಕವರ್ಗವು ಪರಿಣಿತಿ ಹೊಂದಿರುವ ಮತ್ತು ಸರಾಸರಿ ಇಪ್ಪತ್ತು ವರ್ಷಗಳಷ್ಟು ಅನುಭವ ಹೊಂದಿದ್ದು ಕಾಲಕಾಲಕ್ಕೆ ತಮ್ಮ ಪರಿಣಿತಿಯನ್ನು ಅನೇಕ ತರಬೇತಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವ ಮೂಲಕ ಮೇಲ್ಮಟ್ಟಕ್ಕೇರಿಸಿಕೊಳ್ಳುವ ವ್ಯವಸ್ಥೆಯನ್ನು ಹೊಂದಿರುತ್ತಾರೆ. ಇಲ್ಲಿನ ಶಿಕ್ಷಕರು ವರ್ಷದಲ್ಲಿ ಕನಿಷ್ಟ ಮೂರುಬಾರಿ ಹದಿನೈದು ದಿನಗಳ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಆಡಳಿತ ವರ್ಗವೂ ಕೂಡಾ ವಿದ್ಯಾರ್ಥಿಗಳ ಮತ್ತು ಪೋಷಕರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿದೆ. ಶಾಲೆಯನ್ನು ಸಮುದಾಯದ ಏಳಿಗೆಗೆ ಸಾಧನವೆಂದು ಬಗೆದಿರುವ ಆಡಳಿತ ಮಂಡಲಿಯು ಗೊತ್ತು ಮಾಡಿರುವ ಶುಲ್ಕವು ಎಲ್ಲರ ಕೈಗೆಟುವಂತಿದ್ದು ವರ್ಷಕ್ಕೆ ಸಾವಿರದೈನೂರರ ಆಸುಪಾಸಿನಲ್ಲಿದೆ.

ಈ ಶಾಲೆಯ ವಿಳಾಸ : ಮಹಿಳಾ ಮಂಡಲಿ ವಿದ್ಯಾಸಂಸ್ಥೆ, 3ನೇ ಅಡ್ಡರಸ್ತೆ, ನರಸಿಂಹರಾಜ ಬಡಾವಣೆ, ಬೆಂಗಳೂರು – 560019.

ಶಾಲೆಯ ಸಮಯ: 9:30ರಿಂದ 3:30ರವರೆಗೆ ಮತ್ತು ಶನಿವಾರ ಬೆಳೆಗ್ಗೆ 8:00ರಿಂದ 11:00ರವರೆಗೆ

ಗೂಗಲ್ ಮ್ಯಾಪಿನಲ್ಲಿ ಶಾಲೆಯ ಗುರುತು:

mahila_mandali_map