Blog Archives

ನಿರ್ಮಲ ಕಾನ್ವೆಂಟ್ ಶಾಲೆ – ಬಾಳೆಹೊನ್ನೂರು

“ನಿರ್ಮಲ ಕಾನ್ವೆಂಟ್” ಹೆಸರಿನ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ 1962ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಶುರುವಾಯಿತು. ಇದು ಕಾಫಿತೋಟದ ನಡುವೆ ಇರುವ ಶಾಲೆಯಾಗಿದ್ದು, ಮಕ್ಕಳಿಗೆ ಕಲಿಕೆಯಲ್ಲಿ ತೊಡಗಲು ಪ್ರಶಾಂತ ವಾತಾವರಣ ಒದಗಿಸಿಕೊಟ್ಟಿದೆ. ಐವತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಶಾಲೆಗೆ, ಇದೀಗ ಸುವರ್ಣ ವರ್ಷ.

baaleHonnuru_1baaleHonnuru_2

ಮಲೆನಾಡಿನ ಚಿಕ್ಕ ಊರಿನಲ್ಲಿ ಇದ್ದರೂ, ಕಳೆದ ಐವತ್ತು ವರ್ಷಗಳಲ್ಲಿ ಇಲ್ಲಿ ಕಲಿತು ಹೊರಬಂದ ಸಾವಿರಾರು ಮಂದಿ, ವೈದ್ಯಕೀಯ, ಎಂಜಿನಿಯರಿಂಗ್, ಸಂಶೋಧನೆ, ಕಲೆ, ಸಾಹಿತ್ಯ, ಉದ್ಯಮ, ಮಿಲಿಟರಿ ಮುಂತಾದ ವಲಯಗಳಲ್ಲಿ ತೊಡಗಿಕೊಂಡಿದ್ದಾರಂತೆ. “ಮಕ್ಕಳು ಅಂಕ ಗಳಿಸುವುದಷ್ಟೇ ಮುಖ್ಯವಲ್ಲ, ಬದುಕಿನ ಮೌಲ್ಯಗಳನ್ನೂ ರೂಡಿಸಿಕೊಳ್ಳಬೇಕು” ಎಂಬುದು ಈ ಶಾಲೆಯ ಧ್ಯೇಯವಾಗಿದೆ. ಇಲ್ಲಿ ಓದಿದ ಮಕ್ಕಳು, ಹಲವಾರು ವಲಯಗಳಲ್ಲಿ ಯಾರಿಗೂ ಕಮ್ಮಿಯಿಲ್ಲದಂತಹ ಸಾಧನೆಗೈಯ್ಯಲು ಸಾಧ್ಯವಾದುದು ಇಲ್ಲಿ ರೂಡಿಸಿಕೊಂಡ ಮೌಲ್ಯಗಳಿಂದಲೇ ಎಂದು ಈ ಶಾಲೆಯ ಕಲಿಸುಗರು ನೆನೆಯುತ್ತಾರೆ.
baaleHonnuru_3

ಇಲ್ಲಿ ಸದ್ಯಕ್ಕೆ ಒಂದರಿಂದ ಏಳನೆಯ ತರಗತಿಯವರೆಗೆ ಸುಮಾರು ಐನೂರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದು, ಹತ್ತು ಜನ ಕಲಿಸುಗರಿದ್ದಾರೆ. ಈಗಿರುವ ಹಳೆಯ ಕಟ್ಟಡದ ಜೊತೆಗೆ ಹೊಸದಾಗಿ ಐದು ಕೋಣೆಗಳಿರುವ ಒಂದು ಕಟ್ಟಡವನ್ನು ಕಟ್ಟಲಾಗಿದ್ದು, ಇನ್ನೂ ಕೆಲವು ಕೋಣೆಗಳನ್ನು ಕಟ್ಟುವ ಹಾಗೂ ಸ್ಮಾರ್ಟ್ ತರಗತಿಗಳನ್ನು ಶುರು ಮಾಡುವ ಯೋಜನೆಯಿದೆಯಂತೆ.
ಇಲ್ಲಿನ ಪ್ರಶಾಂತ ಮತ್ತು ಸುಂದರ ಪರಿಸರದಲ್ಲಿ ಕುಣಿದು ಕುಪ್ಪಳಿಸುತ್ತಾ ಬೆಳೆಯುವ ಮಕ್ಕಳು, ತುಂಬಾ ಚುರುಕಾಗಿದ್ದು, ಸಾಂಸ್ಕ್ರುತಿಕ ಮತ್ತು ಆಟೋಟಗಳಲ್ಲಿ ಅವರ ಚುರುಕುತನ ಎದ್ದು ಕಾಣುತ್ತದೆ, ಎಂಬುದು ಹಲವು ವರ್ಷಗಳಿಂದ ಇಲ್ಲಿನ ಮುಖ್ಯಶಿಕ್ಷಕಿಯಾಗಿರುವ ಸಿಸ್ಟರ್ ಐರಿನ್ ಅವರ ಅನುಭವದ ಮಾತು.

ವಿಳಾಸ:
ನಿರ್ಮಲ ಕಾನ್ವೆಂಟ್ ಕನ್ನಡ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ,
ಬಾಳೆಹೊನ್ನೂರು,
ನರಸಿಂಹರಾಜಪುರ ತಾಲೂಕು,
ಚಿಕ್ಕಮಗಳೂರು ಜಿಲ್ಲೆ.
ಗೂಗಲ್ ಮ್ಯಾಪಿನಲ್ಲಿ ನಿರ್ಮಲ ಕಾನ್ವೆಂಟ್ ಶಾಲೆಯ ಗುರುತು:
Nirmala-Convent-Balehonnur-Map